Thursday, January 17, 2019

ಕನ್ಫ್ಯೂಷನ್ಸ್ – 1

 


 ಹೊರಟುಬಿಡು ಪ್ಲೀಸ್….

ನಿನಗೆ ಯಾವುದು ಅನುಕೂಲವೋ ಅದ್ಕಾಗಿಯಷ್ಟೇ ನೀನು ಮಾತನಾಡೋದು ಅಂತ ನಾನು ಹೇಳಿದರೆ ಅದು ನನಗೇ ಪುನಃ ಅನ್ವಯಿಸಿಬಿಡತ್ತೆ ಅನ್ನೋದು ಕಾಡಲಿಕ್ಕೆ ಆರಂಭಿಸಿದ್ದಾಗಿನಿಂದ ನಾನು ಹೆಚ್ಚು ಮಾತನಾಡೋದು ಬಿಟ್ಟೆ ಕಣೊ! ಆ ಅನುಕೂಲ ಯಾವುದೋ ಗೊತ್ತಿಲ್ಲ. ಇದೊಂದು ಕೊನೆಯಿರದ ವಾಕ್ಯ ಸರಣಿ! ನೀನು ನನಗೆ ಹೇಳ್ತಿರ್ಬೋದು,  ನಾನು ನಿನೆಗೆ ಹೇಳ್ತಿರ್ಬೋದು. ಈ ಮಾತು ಅನ್ನೋದು ಯಾಕೋ ಒಂದು ರೀತಿ ಜೇಡರ ಬಲೆಯ ಹಾಗೆ ಅನ್ನಿಸ್ತಿದೆ. ನಾನೇ ಹೆಣೆದ ಬಲೆಯೊಳಗೆ ನಾನೇ ಸಿಕ್ಕಾಕೊಂಡು ಬಿಡಿಸಿಕೊಳ್ಳೋದಿಕ್ಕೆ ಜೀವಮಾನವೆಲ್ಲಾ ಹೊಡೆದಾಡೊ ಸ್ಥಿತಿಯಾಗಿಹೋಗಿದೆ ಯಾಕೋ ನನಗೆ.

ಇದಕ್ಕಿನ್ನೊಂದು ಹೇಳ್ತೀನಿ ಕೇಳು! ಒಂದಷ್ಟು ದಿನಗಳಿಂದ ನನಗೆ ಹೀಗೆ ಅನ್ನಿಸ್ತಿತ್ತು. ನಾನೊಂದು ಫಿಲಾಸಫಿಯ ಹಿಂದೆ ಬಿದ್ದೆ. ಪ್ರತಿಯೊಬ್ಬರ ಪ್ರತಿಕ್ರಿಯೆ ಹಿಂದೆ ಒಂದು ಭೌತಿಕ ಕಾರಣವೇ ಇರಬೇಕು. ಆ ಪ್ರತಿಕ್ರಿಯೆಯನ್ನು ಅವರೊಳಗೆ ಪ್ರಚೋದಿಸುವುದು ಒಂದು ಬಾಹ್ಯ ಭೌತಿಕ ಕ್ರಿಯೆಯೋ, ಅಥವಾ ಅವರ ಮೆದುಳಲ್ಲೇ ನಡೆಯುವ ಒಂದು ಆಂತರಿಕ ಸ್ವ-ವಿದ್ಯುದ್ರಾಸಾಯನಿಕ ಕ್ರಿಯೆಯೋ. ಉದಾಹರಣೆಗೆ, ಕೇವಲ ಉದಾಹರಣೆಗಷ್ಟೇ: ಸೂಳೆ ಮಗನೆ ಎನ್ನುವ ಧ್ವನಿ ತರಂಗವೊಂದು ಕಿವಿಯ ತಮಟೆಯ ಮೇಲೆ ಉತ್ಪಾದಿಸುವ ವೈಬ್ರೇಷನ್ ಗಳು ಹೇಗೋ ನರಗಳ ಮುಖೇನ ಮೆದುಳಿಗೆ ತಲುಪಿ, ಮೆದುಳಲ್ಲಿ ಆ ಪದದ ತರಂಗಕ್ಕೆಂದೇ ಇದ್ದ ನೆನಪೊಂದನ್ನ ಕೆದಕಿ, ಆ ನೆನಪಿನ ಸುತ್ತಲೂ ಹೆಣೆದುಕೊಂಡಿದ್ದ ಇತರೆ ಮೆದುಳಿನ ಭಾಗಗಳನ್ನೂ ಸಹ ಪ್ರಚೋದಿಸಿ, ಸಂಬಂಧಪಟ್ಟ ದೇಹ ಭಾಗಗಳಿಗೆ ಸೂಕ್ತ ರಾಸಾಯನಿಕಗಳು ತಲುಪುವಂತೆ ಮಾಡಿ, ಮುಖವನ್ನು ಗಂಟಿಕ್ಕುವುದೋ, ಕೈಯನ್ನು ಎತ್ತಿಸುವುದೋ, ಅಥವಾ ಇನ್ನೇನನ್ನೋ ಬಾಯಿಯ ಮುಖೇನ ಹೊರಗೆ ಹೊರಳಿಸಲು ಯತ್ನಿಸುವುದೋ ಮಾಡುತ್ತದಲ್ಲ ಹಾಗೆ. ಆಗೆಲ್ಲಾ - ಆಗೇನೂ ಈಗಲೂ ಸಹ – ಇದು ಅದ್ಭುತವೆನಿಸುತ್ತಿತ್ತು. ಎಂಥಹಾ ವಿಸ್ಮಯ ಪ್ರಕ್ರಿಯೆ! ಅದೆಷ್ಟು ಮಿಲಿ ಸೆಕೆಂಡುಗಳಲ್ಲಿ - ಅಲ್ಲಾ ಅದಕ್ಕಿಂತಲೂ ಎಷ್ಟೋ ಪಟ್ಟು ಕಡಿಮೆ ಸೆಕೆಂಡುಗಳು ಇರಬೋದೇನೋ - ಈ ಪ್ರತಿಕ್ರಿಯೆ ನನ್ನ ದೇಹದ ಮುಖೇನ ಹೊರಳಿರುತ್ತದೆ. ಈ ಫಿಲಾಸಫಿಯ ತತ್ವವೆಂದರೆ ಇದರಲ್ಲಿ ಸರಿ ಅಥವಾ ತಪ್ಪು ಎನ್ನುವುದೂ ಏನೂ ಇಲ್ಲ. ಎಲ್ಲವೂ ತನ್ನಂತಾನೇ ಆಗುವ ಕ್ರಿಯೆ. ನಾನೇನೂ ಮಾಡುವುದಿಲ್ಲ. ನನ್ನ ವಿಲ್ ಪವರ್ ಎನ್ನುವುದೂ  ಸಹ  ತನ್ನಂತಾನೇಯೇ ಯಾವುದೋ ಆಂತರಿಕ ಪ್ರಲೋಭೇಗೆ ಒಳಗಾಗಿ ಹೊಮ್ಮುವುದು. ಕೋಪ, ದ್ವೇಷ, ಅಸೂಯೆ, ಕಾಮ ಎಲ್ಲವೂ ತನ್ನಂತಾನೇ ನಡೆಯುವುದು. ಅರೇ! ಎಂಥಾ ಅದ್ಭುತವಾದ ಫಿಲಾಸಫಿಯಲ್ಲವೇ ಅಂತ ಅನ್ನಿಸ್ಲಿಕ್ಕೆ ಶುರು ಆಗಿಬಿಡ್ತು ಇದನ್ನ ಕಂಡುಕೊಂಡೊಡನೆ. ಆದರೆ ಈಗ  ನೋಡು, ತಪ್ಪೇ ಇಲ್ಲ ಅಂದ ಮೇಲೆ ನಾನು ಒಂದು ಹೆಣ್ಣನ್ನ ಬಲಾತ್ಕಾರ ಮಾಡೋದು ತಪ್ಪೇ ಅಲ್ಲ ಅಲ್ವಾ! ಅದು ತನ್ನಿಂತಾನೇ ನಡೆಯುವಂಥ ಕ್ರಿಯೆ ಅಲ್ವೇ? ನಮ್ಮ ಸಂಪೂರ್ಣ ಸಾಮಾಜಿಕ ಬುಡವನ್ನೇ ಹಿಡಿದು ಅಲಗಾಡಿಸಿದಂತಾಗಿ ಹೋಯ್ತಲ್ಲೋ ಈ ಫಿಲಾಸಫಿಯಿಂದ. ಆದರೆ ಇಲ್ಲ. ಇಲ್ಲಿ ನೋಡು! ನಾನು ಬಲಾತ್ಕಾರ ಮಾಡೋದು ಎಷ್ಟು ಸಹಜವೋ, ಬಲಾತ್ಕಾರ ಮಾಡಿದ್ದಕ್ಕೆ ನನ್ನನ್ನ ನೇಣಿಗೇರಿಸ್ಬೇಕೋ ಅಥವಾ ಮತ್ತಿನ್ನೇನು ಮಾಡ್ಬೇಕು ಅಂತ ಚಿಂತನೆ ಮಾಡೋದು ಅಷ್ಟೇ ಸಹಜವೇ! ಏಕೆಂದರೆ ನಾನು ಬಲಾತ್ಕಾರ ಮಾಡಿರೋದು ಒಂದು ರೀತಿಯ ಭೌತಿಕ ಕ್ರಿಯೆ. ಇದು ಜನರ ಮೆದುಳೊಳಗೆ ಒಂದು ವಿದ್ಯುದ್ರಾಸಾಯನಿಕ ಕ್ರಿಯೆಯನ್ನ ಉಂಟು ಮಾಡುವುದಕ್ಕೆ ಪ್ರಚೋದಕನಂತೆ! ಹಾಗಾದರೆ ಏನೇ ನಡೆದರೂ ಅದೆಲ್ಲಾ ತನ್ನಿಂತಾನೇ ಆಗೋದು! ನಾನು ಮಾತಾನಾಡೋದು ಅಷ್ಟೇ. ಈಗ ಹೇಳ್ತಿರೋದು ಅಷ್ಟೇ! ನಾನು ಈಗ ಹೇಳ್ತಿರೋದು ಅಷ್ಟೆ ಅಂತ ಹೇಳ್ತಿರೋದು ಅಷ್ಟೇ! ಎಲ್ಲವೂ ತನ್ನಿಂತಾನೆ ಆಗ್ತಿರೋದು. ಇದು ಕೊನೆಯೇ ಇಲ್ಲದ ಸರಣಿ ಕಣೋ! ಈಗ ನಿನಗೆ ಹೇಳ್ತಿರೋದೂ ಅಷ್ಟೇ ಅಂತ ಹೇಳಿದ್ದೂ ಅಷ್ಟೇ ಅಂತ ಹೇಳಿದ್ದೂ ಅಷ್ಟೇ ಅಂತ ಹೇಳ್ತಾನೇ ಹೋಗ್ತಾ ಇರಬೋದು. ಇದಕ್ಕೆ  ಕೊನಯಿಲ್ಲ ಅಂತ ನಾ ಹೇಳ್ತಿರೋದು ಅಷ್ಟೇ! ಎಲ್ಲವೂ ತನ್ನಿಂತಾನೇ ಆಗ್ತಿರೋದು. ಇದು ಹೊಳೆದ ಮೇಲೆ ಮಾತನಾಡೋದು, ಮಾತನಾಡದೇ ಇರೋದಕ್ಕೂ ಏನೂ ವ್ಯತ್ಯಾಸ ಅನ್ನಿಸ್ಲಿಲ್ಲ ಅಂತ ನಾ ಹೇಳ್ತಿರೋದಕ್ಕೆ ಅರ್ಥ ಕಲ್ಪಿಸಿಕೊಳ್ಳೋದೂ, ಕೊಳ್ಳದೇ ಇರೋದಕ್ಕೂ ಏನೂ ವ್ಯತ್ಯಾಸ ಇಲ್ಲ. ಛೇ! ನಾನೇ ನನ್ನ ಐಡಿಯಾಗಳಲ್ಲಿ, ಮಾತುಗಳಲ್ಲಿ ಬಂಧಿಯಾಗಿ ಹೋದೇ!

ಈ ಫಿಲಾಸಫಿಯನ್ನ ನಾನು ಕಂಡುಕೊಂಡಿದ್ದು ಯಾಕೆ ಹೇಳ್ತೇನೆ! ನನಗೆ ಯಾವಾಗಲೂ ಹೋಲಿಕೆ ಮಾಡಿಕೊಳ್ಳುವ ಕೆಟ್ಟ ರೋಗವೊಂದಿತ್ತು. ಇದು ಮನಸ್ಸನ್ನ ತುಂಬಾ ಕಾಡಲಿಕ್ಕೆ ಶುರು ಮಾಡಿಬಿಡ್ತು, ಇದು ನಿಜವಾಗಿಯೂ ರೋಗ ಅಂತ. ನಾನೊಬ್ಬ ಕೆಟ್ಟವನು, ಬಹಳ ತಪ್ಪು ಮಾಡ್ತಿದ್ದೀನಿ ಅನ್ನಿಸ್ತಿತ್ತು! ಆ ಸಮಯದಲ್ಲಿ ಈ  ಫಿಲಾಸಫಿ ನನಗೆ ಎರಡು ರೀತಿಯಲ್ಲಿ ಈ ರೋಗದಿಂದ ಹೊರಬರಲಿಕ್ಕೆ ಸಹಾಯ ಮಾಡ್ತು! ನೋಡು, ಈ ಎರಡೂ ದಾರಿಗಳೂ ಸಹ ಮೌಲ್ಯವೆಂಬ ಹೆಬ್ಬಾಯಿಗೆ ಬಿದ್ದವೇ. ಇದರಲ್ಲಿ ಒಂದು ಅಪಮೌಲ್ಯವಾದದ್ದು ಅನ್ನಿಸ್ತದೆ, ಇನ್ನೊಂದು ಮೌಲ್ಯಯುತವಾದದ್ದು ಅನ್ನಿಸ್ತದೆ ನಿಂಗೆ. ಒಂದು - ಹೋಲಿಕೆ ಮಾಡಿಕೊಳ್ಳೋದು  ತಪ್ಪೇ ಅಲ್ಲ! ಎಲ್ಲವೂ ತನ್ನಿಂತಾನೆ ನಡೆಯೋದು. ಹೋಲಿಕೆಯ ನಂತರ ನಾನು ಕೊಡುವ ಪ್ರತಿಕ್ರಿಯೆಯೂ, ನಾನು ಮಾಡುವ ಕ್ರಿಯೆಯೂ ಯಾವುದಕ್ಕೂ ಕೆಟ್ಟದ್ದು, ಒಳ್ಳೆಯದು ಎಂಬ  ಲೇಪನವನ್ನ ಕೋಡಲಿಕ್ಕೆ ಆಗೋದೂ ಇಲ್ಲ. ನನ್ನ ಕ್ರಿಯೆ-ಪ್ರತಿಕ್ರಿಯೆಯ ನಂತರ ನನ್ನನ ಜನ ನಡೆಸಿಕೊಳ್ಳುವ ರೀತಿಯೂ ಸಹಜವೇ! ಎಲ್ಲವೂ ತನ್ನಿಂತಾನೇ  ಆಗೋದೂ!

ಇನ್ನೊಂದು – ನನ್ನ ಜೀವನ, ನನ್ನ ಸ್ಥಿತಿ ಎಲ್ಲವೂ ಭೂತಕಾಲದ ತನ್ನಿಂತಾನೇ ನಿರ್ಧರಿತವಾದದ್ದವು. ಅದೇ ರೀತಿ ಅವರದ್ದೂ! ಛೀ! ಈ ಎರಡನೆಯ ಹಾದಿ ಮೊದಲನೆಯದ್ದಂಥೇ ಅನ್ನಿಸ್ತಿದ್ಯಲ್ಲ. ಹೋಗಲಿ ಬಿಡು. ನಾ  ಹೇಳ್ಬೇಕಾಗಿದ್ದದ್ದು ಇಷ್ಟೇ. ನನ್ನ ಸ್ಥಿತಿಗೆ ನನ್ನ ಭೂತವೇ ಕಾರಣ. ಆದ್ದರಿಂದ ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲವೆಂದು. ಅಷ್ಟೇ!

ಆದರೆ ಇದು ಕ್ಷಣಿಕ ಕಾಲಕ್ಕೆ ನಮ್ಮಲ್ಲಿಯ ಬಾಡಿ ಪೇಯಿನ್ ಹೋಗಿಸುವ ಪೇಯಿನ್ ಕಿಲ್ಲರ್ ಇದ್ದಂತೆ. ಇದು ಸಾಧ್ಯವೇ ಇಲ್ಲ ಕಣೋ ದೀರ್ಘಕಾಲದವರೆಗೆ. ಜೀವನ ಏನು ಹುಡುಗಾಟ ಅಂದ್ಕೊಂಡಿದೀಯ? ಇಲ್ಲಿ ಘಟನೆಗಳು ಒಂದರ ಹಿಂದೆ ಒಂದು ಎಷ್ಟು ವೇಗವಾಗಿ, ಬೇಗವಾಗಿ ದೊಪ ದೊಪ ಎಂದು ಸುರಿಯುತ್ತವೆ ಎಂದ್ರೆ ನಿನ್ನ ಫಿಲಾಸಫಿಯನ್ನ ಮನಸ್ಸಿನೊಳಗೆ ಮತ್ತೆ ಮತ್ತೆ ತರಿಸಿಕೊಳ್ಳೋಕ್ಕೆ ಸಮಯವೇ ಸಿಗೋದಿಲ್ವೋ! ನೀನು ತರಿಸಿಕೊಂಡ ಕ್ಷಣಮಾತ್ರದಲ್ಲೇ ಮತ್ತೊಂದು ಹೊಸ ರೀತಿಯ ಆಲೋಚನೆಯೊಂದು ಹುಟ್ಟಿಕೊಂಡು ಅದನ್ನು ನಿನ್ನ ಫಿಲಾಸಫಿಯಿಂದ ದಮನ ಮಾಡಲಿಕ್ಕೆ ಸಾಧ್ಯವೇ ಅನ್ನುವ ಮತ್ತೊಂದು ಹೊಸ ಆಲೋಚನೆಯ ಸೃಷ್ಟಿಯಾಗತ್ತೇ! ಥೂ! ದರಿದ್ರ.. ದರಿದ್ರ.. ಎಂಥಾ ನೀಚ  ಸ್ಥಿತಿಯನ್ನ ನಾನು ತಲುಪಿ ಬಿಟ್ಟಿದ್ದೆ! ಹೋಗ್ತಾ ಹೋಗ್ತಾ ನನಗೇ ಅನ್ನಿಸ್ಲಿಕ್ಕೆ ಶುರುವಾಯ್ತು ನಾನು ನಿಜವಾಗಿಯೂ ರೋಗಗ್ರಸ್ಥನಾಗಿ ಹೋಗಿದ್ದೇನೆ ಅಂತ! ಫಿಲಾಸಫಿಯೆಂಬ ಓಷಧವನ್ನ ಕ್ಷಣಕ್ಷಣಕ್ಕೂ ನುಂಗಿಕೊಳ್ಳುತ್ತಿದ್ದ ನಾನು ಎಂಥಾ ರೋಗಗ್ರಸ್ಥ ನೋಡು. ನನಗೆ ಇನ್ನಷ್ಟು ರೇಜಿಗೆ ಆಗೋಯ್ತು. ಆದರೆ ನನ್ನಿಂದ ಈ ಹೋಲಿಕೆಯೆನ್ನುವ ಕೆಟ್ಟ ರೋಗ ಹೋಗಲೇ ಇಲ್ವೋ! ಯಾಕೆ ಅದು ಅಷ್ಟು ನೋವು ತರಿಸ್ಬೇಕು?

ಈ ಹೋಲಿಕೆ ಅನ್ನೋ ರೋಗ ಮತ್ತಷ್ಟು ಹೋಲಿಕೆಯನ್ನ ತರಿಸ್ತಲೇ ಇರತ್ತೆ. ಹೇಗೆ ಹೇಳ್ತೀನಿ ಕೇಳು. ನಿನ್ನ ಪಕ್ಕ ಇರೋವ್ನು ನಿನಗಿಂತ ಚೆಂದ ಬರೀತಾನೆ ಅನ್ನಿಸ್ತು ಅನ್ಕೋ. ಇದರ ಬಗ್ಗೆ ನಿನಗೆ ಹಿಂದೆ ಹೇಳಿದ್ದೆ ಕಣೋ! ನೆನ್ಪಿಸ್ಕೋ, ಜನ  ನನ್ನನ್ನ ಇಲ್ಲಿವರೆಗೂ ಹೇಗೆ ನೋಡ್ತಿದ್ರೋ ಅದೆಲ್ಲಾ ಈಗ  ಅವನ  ಸ್ವತ್ತಾಗಿ ಹೋಯ್ತಲ್ಲ ಅನ್ನೋ ಭಯವೇನೋ ಅದು. ಗೊತ್ತಿಲ್ಲ. ಈಗ ನೀನು ಆ ರೀತಿಯ ಹೋಲಿಕೆ ಮಾಡಿಕೊಂಡೆ ಅನ್ಕೋ, ನಿನ್ನನ್ನ ಇನ್ನೊಂದು ರೀತಿ ಭೀತಿ ಆವರಿಸತ್ತೆ. ಥೂ! ನೀನು ಈ ರೀತಿ ಹೋಲಿಕೆ ಮಾಡಿಕೊಳ್ಳೋ ಹಾಗೆ ನಿನ್ನ ಪಕ್ಕದವನು ಹೋಲಿಕೆ ಮಾಡಿಕೊಳ್ತಿಲ್ವಲ್ಲ. ಛೇ! ಅವನಿಗೆ ಈ ರೀತಿಯ ರೋಗವಿಲ್ಲವಲ್ಲ ಅನ್ನೋ ಹೊಸ ಹೋಲಿಕೆಯ ವೈರಸ್  ಹರಡತ್ತೇ ಕಣೋ! ನೋಡು ಇದು  ಹೀಗೆಯೇ ಮುಂದುವರೆಯುತ್ತಾ ಹೋಗತ್ತೆ. ಹೇಗೆ ಅಂದ್ರೆ, ಅವನು ಹೋಲಿಕೆ ಮಾಡೋಲ್ಲ, ನಾನು ಹೋಲಿಕೆ ಮಾಡ್ತೀನಿ ಅನ್ನೋ ಆಲೋಚನೆ ಅವನಲ್ಲಿ ಇಲ್ಲ, ನನ್ನಲ್ಲಿದೆ ಅನ್ನೋ ಹೊಸ ಹೋಲಿಕೆ ಬಂತು! ಹೀಗೆ ಹೇಳ್ತಾ ಹೋಗ್ತಾ ಇರಬೋದು. ಮಜ ಇದೆ  ಅಲ್ವಾ ಒಂದು ರೀತಿ ಈ ತರ್ಕ. ವಾಹ್! ನೋಡು, ನೋಡು. ನಾನು ರೋಗಗ್ರಸ್ಥರಲ್ಲಿ ರೋಗಗ್ರಸ್ಥ. ಅಲ್ಲ ಅಲ್ಲ. ರೋಗ ಗ್ರಸ್ಥರಲ್ಲಿ, ರೋಗ ಗ್ರಸ್ಥರಲ್ಲಿ, ರೋಗಗ್ರಸ್ಥ. ಅಲ್ಲಾ ಅಲ್ಲಾ… ಹೀಗೆ ಹೇಳ್ತಾನೇ ಇರಬೋದು. ಥೂ!  ಈ ಮಾತು, ಈ ನನ್ನ ಐಡಿಯಾಲಜಿಗಳು ಎಲ್ಲವೂ ಜೇಡರ ಬಲೆಯಂತೆ ನನ್ನನ್ನೇ ನುಂಗಿಕೊಂಡು ಬಿಡ್ತಿದೆ. ನಾನೊಬ್ಬ ಕಲಸುಮೆಲೋಗ್ರ!

ಈಗ ತಿಳೀತಾ ಯಾಕೆ ನನ್ನನ್ನ ಮಾತಿಗೆಳೀಲೇ ಬೇಡ ಅಂತ ನಾ ಹೇಳಿದ್ದು? ನಾನು ಮಾತಾಡದೇ ಇರೋದು ಅದೇ  ಕಾರಣಕ್ಕೇ ಆಗಿತ್ತು ಕಣೋ! ನಾನೊಂದು ಹೊಸ ಫಿಲಾಸಫಿಯ ಹಿಂದೆ ಬಿದ್ದಿದ್ದೇನೆ ಈಗ. ಏನೂ ಆಲೋಚನೆ ಮಾಡಕೂಡದು ಅಂತ. ಅದು ಸಾಧ್ಯವಿದೆ ಅನ್ನಿಸ್ತಿದೆ. ಬದುಕಿದ್ದಾಗ್ಲೇ ಸಾಧ್ಯವಿದೆ ಅನ್ನಿಸ್ತಿದೆ. ಆದ್ರೆ ತಿಳೀತಿಲ್ಲ ಹೇಗೆ! ಪ್ಲೀಸ್.. ನನ್ನನ್ನ ಮಾತಾಡಿಸ್ಬೇಡ. ನಾನು ಆಲೋಚನಾಮಜ್ನನಾಗಿಬಿಡ್ತೇನೆ. ಛೀ! ಬೇಡ ಗಿರಿ, ಹೊರಟುಹೋಗು ಪ್ಲೀಸ್. ನಿನ್ನ ಬೇಡಿಕೊಳ್ತೇನೆ. ಇಷ್ಟೆಲ್ಲಾ ನಿನಗೆ ಹೇಳಿದ್ಮೇಲೆ, ನಿನ್ನ ಮುಖಭಾವನೆಗಳನ್ನ ಗಮನಿಸಿದ ಮೇಲೆ, ನನ್ನೊಳಗೆ ಬಂದ ಇಷ್ಟೆಲ್ಲಾ ಆಲೋಚನೆಗಳು ನಿನಗೆ ಬಂದೇ ಇಲ್ಲ ಅಂತ ನಾನು ಹೋಲಿಸಿಕೊಳ್ಳೋಕ್ಕೆ ಮೊದಲೇ ನೀನು ಹೊರಟುಬಿಡು ದಯಮಾಡಿ. ನನ್ನನ್ನ ಸದ್ಯಕ್ಕೆ ಈ ಹೋಲಿಕೆಯ ಬಂಧನದಿಂದ ಮುಕ್ತನಾಗಿಸು. ಪ್ಲೀಸ್.

 

No comments:

Post a Comment