Saturday, September 20, 2025

ಛಾಯೆ

ಆ ಸಂಜೆ ಮನೆಗೆ ಬರುವ ವೇಳೆಗೆ ಕೊಂಚ ಹೈರಾಣಾಗಿದ್ದ. ಒಂದು ಸರ್ಕಾರೀ ಶಾಲೆಯಲ್ಲಿ ಬೆಳಿಗ್ಗೆ ವಸ್ತು ಪ್ರದರ್ಶನಕ್ಕೆ ಹೋಗಬೇಕಿತ್ತು‌. ಅಂದೇ ಏಕೆ ಆಯೋಜಿಸಿದ್ದರು? ಆ ಶಾಲೆಯ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಿಗೆ ಅಂದೇ ಆಗಬೇಕಿತ್ತು‌, ಹಾಗಾಗಿ. ವಸ್ತು ಪ್ರದರ್ಶನಕ್ಕೂ ಮುನ್ನ ಒಂದು ವೇದಿಕೆ ಕಾರ್ಯಕ್ರಮ. ಅಲ್ಲಿ ಈತ ಮಾತನಾಡಬೇಕಿತ್ತು. ಏನು ಮಾತಾಡೋದು? ಹಿಂದಿನ ದಿನ ಸಾಕಷ್ಟು ಯೋಚಿಸಿ ತಯಾರಿಸಿಕೊಂಡಿದ್ದೇನೋ ಹೌದು! ಆದರೆ, ಅದು ಹಳ್ಳಿ! ತನ್ನ ಮಾತು ರುಚಿಸುವುದೇ? ತನ್ನದೇ ಮೌಢ್ಯವೆಂಬಂತೆ ಕಂಡುಬಿಟ್ಟಲ್ಲಿ? ಆ ಎಸ್.ಡಿ.ಎಂ.ಸಿ ಯ ಅಧ್ಯಕ್ಷರು ವೈಚಾರಿಕರಂತೆ ಬಿಂಬಿತಗೊಂಡವರು. ಗ್ರಹಣದ ದಿನ  ಗ್ರಹಣದ ಕಥೆಗಳ, ಇತಿಹಾಸದ ಅಂತೆಯೇ ವೈಜ್ಞಾನಿಕ ಆಯಾಮಗಳನ್ನ ತಮ್ಮೂರಿನ ಜನರ ಮುಂದೆ ತೆರೆದಿಡುವುದು ಅವರ ಉದ್ದೇಶವಾಗಿತ್ತು. ಅವರು ಫುಕೋಕನ ದೊಡ್ಡ ಅಭಿಮಾನಿಯಂತೆ. ತೇಜಸ್ವಿಯನ್ನ ಅನುಕರಿಸಿದ್ದೂ ಹೌದಂತೆ. ಕಾರ್ಯಕ್ರಮವೆಲ್ಲಾ ಕಳೆದು ತಮ್ಮ 'ಸಹಜ ಕೃಷಿಯ' ಪ್ರಯೋಗವನ್ನ ತೋರಲಿಕ್ಕೆ ಈತನನ್ನ ತೋಟಕ್ಕೆ ಕರೆದೊಯ್ದಿದ್ದರು. ಈತನೂ ಫುಕೋಕಕನನ್ನ ಮೆಚ್ಚಿದ್ದವನೇ. ಪುಕೋಕನ‌ ಬಗ್ಗೆ ಮೊದಲಿಗೆ ತಿಳಿದದ್ದು ಅದೇ ತೇಜಸ್ವಿಯ 'ಸಹಜ ಕೃಷಿ'ಯಿಂದ. ಕಥೆಗಳಿಗೆ ಹೆಚ್ಚು ಮಾರಿಹೋಗುತ್ತಿದ್ದ ಈತ ಫುಕೋಕನದ್ದೇ ಸಹಜ ಕೃಷಿಯ ಬಗೆಗಿನ‌ ಪುಸ್ತಕ ಕೊಂಡು ತಂದಿದ್ದ. ಸಂಪೂರ್ಣವಾಗಿ ಓದಲಾಗಿರಲಿಲ್ಲ. ತಾನು ಓದಿದ್ದು, ಅದರ ಪ್ರತಿಬಿಂಬವೇ ತನ್ನ ಈ ತೋಟ ಎಂದು ಎಲ್ಲೆಂದರಲ್ಲಿ ಹುಚ್ಚಾಪಟ್ಟೆ ಬೆಳೆದಿದ್ದ ಕಳೆಗಳನ್ನು ತೋರಿಸುತ್ತಾ ಅವರು ನಗುತ್ತಿದ್ದರು. ಬರೇ ಕಥೆಗಳನ್ನ ಕೊಚ್ಚುತ್ತಾ ತಿರುಗುತ್ತಿದ್ದ ಈತ ಒಮ್ಮೆಯಾದರೂ ಈಗ ಮೌನಿಯಾಗಿದ್ದ. ಬ್ರೂನೋ, ಗೆಲಿಲಿಯೋರ ಕಥೆಯನ್ನ ಅಂತೆಯೇ ತಾನು ಕೇಳಿದ್ದ ಕೊಲಂಬಸ್ ನ ಗ್ರಹಣದ ಕಥೆಯನ್ನ ಮಕ್ಕಳಿಗೆ ಹೇಳುತ್ತಾ ಮೌಢ್ಯವನ್ನ ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳುವುದು ನಮ್ಮ ಕರ್ತವ್ಯವೆಂದು ಹೇಳಿದ್ದಕ್ಕೆಯೇ ಆ‌ ಅಧ್ಯಕ್ಷರು ಕಾರ್ಯಕ್ರಮದ ನಂತರ ಈತನೊಟ್ಟಿಗೆ ಆಪ್ತರಾಗಿದ್ದಲ್ಲವೇ?

Tuesday, September 2, 2025

ಜಾಲ

ಇದೇ ಅವನ ಊರು ಎಂದು ಹೇಳಲು ಆಗದು. ಯಾವ ಊರಿನ ಯಾವ ಜನಕ್ಕೂ ಹೊಂದಿಕೊಳ್ಳಲು‌ ಸೈ.‌ ಆದರೂ ಎಂದಿಗೂ ಹೊಂದಿಕೊಳ್ಳುವವನೇ ಹೊರತು, ಇತರರು ಹೊಂದಿಕೊಳ್ಳಲಿಕ್ಕಾಗಿ ಕಾದವನಲ್ಲ. ಆದರೆ ಯಾವುದೂ‌ ತನ್ನೂರಲ್ಲ.