Tuesday, September 2, 2025

ಜಾಲ

ಇದೇ ಅವನ ಊರು ಎಂದು ಹೇಳಲು ಆಗದು. ಯಾವ ಊರಿನ ಯಾವ ಜನಕ್ಕೂ ಹೊಂದಿಕೊಳ್ಳಲು‌ ಸೈ.‌ ಆದರೂ ಎಂದಿಗೂ ಹೊಂದಿಕೊಳ್ಳುವವನೇ ಹೊರತು, ಇತರರು ಹೊಂದಿಕೊಳ್ಳಲಿಕ್ಕಾಗಿ ಕಾದವನಲ್ಲ. ಆದರೆ ಯಾವುದೂ‌ ತನ್ನೂರಲ್ಲ.

ತಂದೆ ಬ್ಯಾಂಕಿನಲ್ಲಿದ್ದ ಕಾರಣ ಮೂರು ವರ್ಷಗಳಿಗೊಮ್ಮೆ ಒಂದೊಂದು ಊರು. ಹಾಗಾಗಿ ಮೂರು-ನಾಲ್ಕು ಊರುಗಳು, ಮೂರು ನಾಲ್ಕು ಸ್ಕೂಲುಗಳು. ತನ್ನ ಹುಟ್ಟೂರು ತನ್ನೂರು ಎನ್ನುವ ಒಲವಿಲ್ಲ. ಅಲ್ಲಿದ್ದದ್ದು ಮೂರು ನಾಲ್ಕೋ ವರ್ಷಗಳು. ಅವು ಬದುಕಿನ ಮೊದಲ ವರುಷಗಳು. ಜಗತ್ತನ್ನ ಯಾವ ಸ್ವ ಪರಿಜ್ಞಾನವೂ ಇಲ್ಲದೇ ಅನುಭವಿಸೋ ವಯಸ್ಸು. ಈ ವಯಸ್ಸಲ್ಲೆಲ್ಲಿ ತನ್ನೂರು, ತನ್ನ ದೇಶ ಎನ್ನುವ ಭಾವ? ತನ್ನ ವಸ್ತು, ತನ್ನ ವಸ್ತ್ರ, ತನ್ನಪ್ಪ, ತನ್ನಮ್ಮ ಎನಬೋದೇನೋ. ಎಲ್ಲವೂ ಎಲ್ಲರೂ ಕೈಗೆ ಮುಟ್ಟಲಿಕ್ಕೆ ಸಿಗೋರಲ್ಲವೇ. ಆದರೆ ಊರು? ಭಾವಕ್ಕೆ ನಿಲುಕದ 'ಪದ' ಆ ವಯಸ್ಸಿಗೆ‌. ಅದಕ್ಕೊಂದು, ಅಬ್ಬಬ್ಬಾ ಎಂದರೆ, ಹೆಸರಿದ್ದಿರಬೋದು. 

ಈಗಲೂ ಸ್ವಂತ‌ಮನೆ ಉಂಟು, ಮೈಸೂರಲ್ಲಿ. ನಿನ್ನೂರು ಯಾವುದು ಎಂದರೆ, ಈಗಲೂ ಉತ್ತರವಿಲ್ಲ. 'ಈಗಿರೋದು' ಮೈಸೂರು ಅಂತಾನೆ ಹೊರತು, ತನ್ನೂರು ಮೈಸೂರು ಎನ್ನೋದು ಬಾಯಿಗೆ ಬರದು. ತನ್ನೂರೆಂದರೆ, ಅದರ ಮೇಲೊಂದು ಹಕ್ಕಿದ್ದೀತು.  ಹೆಚ್ಚು ಕಡಿಮೆ ಎಲ್ಲಾ ಜನರ ಪರಿಚಯ ಉಂಟು. ಆಗದೋರು, ಆಗೋರು ಎಲ್ಲರೂ ಇರಬೇಕು‌. ಊರಿನ ಹಬ್ಬ ಹರಿದಿನಗಳ, ಆಚರಣೆಗಳ ಪ್ರತಿಯೊಂದರ ರೀತಿ ರಿವಾಜುಗಳೂ ಗೊತ್ತು. ಗಣಪತಿಯನ್ಮ ದೊಡ್ಡ ಕೆರೆಗೆ ಬಿಡುವುದೋ, ಇಲ್ಲ ಸಣ್ಣ ಕೆರೆಗೋ ಎನ್ನುವ ಮಾತುಕತೆಗಳಲ್ಲಿ ತನ್ನ ಅಭಿಪ್ರಾಯವಿಲ್ಲದೇ ನಿರ್ಣಯ ಹೇಗೆ ಸಾಧ್ಯ ಎನ್ನುವ ಹಕ್ಕುಚಲಾವಣೆಯೂ ಉಂಟು. ಯಾರ‌ ಮನೆಯ ಹಬ್ಬವಾದರೂ ಅದರ ಸುದ್ದಿ ಗೊತ್ತಿದ್ದಿರಬೇಕು. ಇವೆಲ್ಲಾ ಯಾವುದೂ ಇವನಿಗೆ ತಿಳಿದೇ ಇಲ್ಲ. ಮಂಡ್ಯದಲ್ಲಿ ಗೌಡನಾಗಿ, ಮಲೆನಾಡಿನ ಮಾಣಿಯಾಗಿ, ಬಯಲುಸೀಮೆಯ ಗಂಡಸಾಗಿ, ಊರುಗಳು ಕೊಟ್ಟ ರೂಪವೇ ಈತನದ್ದು. ನೀವು ಉಡುಪಿಯವರೇ ಎಂದು ಕೆಲವರು ಕೇಳಿದ್ದೂ ಉಂಟು. 'ಯಾಕ್ ಲಾ. ತಿಕಾ ಕಡೀತದ' ಎಂದೂ ಬೈದಿದ್ದಾನೆ. ಹೆಂಡತಿಯ ಊರಿಗೆ ಹೋದ ಹಾಗೆ ಪ್ರತೀ ಊರು ಈತನದ್ದು. ಅಲ್ಲಿಯ ಜನರ ಜೀವಂತಿಕೆಗೆ ತಲೆದೂಗಿದ್ದ. ಯಾವ ಚರ್ಚೆಗೂ, ಯಾವ ಜಗಳಕ್ಕೂ ಊರಿನ ಯಾವನಾದರೂ ತಲೆ‌ ಹಾಕಬಹುದಾದಂತ ಅಧಿಕಾರವನ್ನ ಕಂಡು ಬೆಚ್ಚಿದ್ದ. ಊರಿನ ಹುಡುಗರೆಲ್ಲಾ ಊರ ಹಬ್ಬಗಳಿಗೆ ಪ್ಲಾನ್ ಮಾಡೋದು ಕಂಡು ಅಸೂಯೆಯೂ ಪಟ್ಟಿದ್ದ. ತಾನೂ ಸೇರಿಕೊಳ್ಳಲೇ? ಸೇರಿಸಿಕೊಳ್ಳುವರೇ? ಗೊಂದಲ ಎಂದಿಗೂ.

ತನ್ನೂರು, ತನ್ನವರು ಎನ್ನುವುದು ಅಸ್ಮಿತೆಯೆನ್ನುವ ಮರದ ಕೊಂಬೆಗಳು. ಈತನಿಗೆ ಬೈ ಡಿಫಾಲ್ಟ್ ಆ ಕೊಂಬೆಗಳೇ ಇಲ್ಲದ್ದಾಗ, ಅಕ್ಕ ಪಕ್ಕದವುಗಳಲ್ಲಿ ಸೊಂಪಾಗಿ ಚಾಚಿ, ಗಟ್ಟಿಯಾಗಿ ಬಲಿಷ್ಠವಾಗಿ ಬೆಳಕೊಂಡಿರುವದನ್ನ ನೋಡಿ ಅಸೂಯೆಯೂ, ಆಸೆಯೂ. ಒಮ್ಮೆ ಹೋದಮೇಲೆ ಹೋದಂತೆಯೇ ಎನ್ನುವ ಭಾವದಲ್ಲಿ‌ ಆತ ತನ್ನ ಅಸೂಯೆಯ ಪ್ರಲೋಭನೆಗೊಳಪಟ್ಟು ಹೇಳುತ್ತಲೇ ಇರುತ್ತಾನೆ -"ಎಲ್ಲವನ್ನೂ - ಇದೇ ತಾನು ಎಂದು ತನ್ನನ್ನ ಬಂಧಿಸಲೆತ್ನಿಸುವ ಎಲ್ಲಾ ತೆಕ್ಕೆಗಳನ್ನೂ, ಇತಿಗಳನ್ನೂ, ಅಥವಾ ಅಸ್ತಿತ್ವದ ಹೆಸರಿನ ವರ್ಣನೆಗಳನ್ನೆಲ್ಲಾ ಹರಿದು, ಎಲ್ಲದರಾಚೆಗೆ ಅನ್ಯನಾಗಿ ಸ್ವಚ್ಛಂದವಾಗಿ ಹಾರಬೇಕು."  

'ಊರು ಬದಿಗೆ ಹೋಗಿ ಬಂದ್ರಾ' ಎಂದು ಪಕ್ಕದಲ್ಲಿ‌ ಯಾರೋ ಕೇಳಿದಾಗ, ಸಹಜವಾಗಿಯೇ ಈತ ತಲೆ ಎತ್ತುವುದಿಲ್ಲ, ಆ ಪ್ರಶ್ನೆ ತನಗಲ್ಲ ಎಂದು. 'ನಿಮ್ಮದೂ ಮೇಲುಕೋಟೆಯೇ?' ಎಂದು ಯಾರಾದರೂ ಆಪ್ತವಾಗಿ ಊರಿನ ಹಿನ್ನಲೆಯಿಂದ ಮುಂದುವರೆಯಲಾರಂಭಿಸಿದರೆ, ಒಡನೆಯೇ ಉಸಿರು ಕಟ್ಟಿದ ಹಾಗಾಗಿ ದೂರ ಓಡುವ ಯತ್ನದಲ್ಲೇ ಇರುತ್ತಾನೆ. ಊರು ಈತನಿಗೆ ಒಂದು ಚೌಕಟ್ಟು. ಈ ಕಲ್ಪನೆಯೂ ಒಂದು ಚೌಕಟ್ಟೇ, ಅಲ್ಲವೇ? ಅವನ ಅರಿವಿಗಿನ್ನೂ ಇದು ಬಂದಿಲ್ಲ. ಆದರೂ ಆಸೆಯಿದೆ.‌ ತನ್ನದೂ ಒಂದು ಊರಿದ್ದಿರಬೇಕು ಎಂದು. ಈ ದ್ವಿತ್ವದ ದೆಸೆಯಲ್ಲಿ ಆಗಾಗ್ಗೆ ತಲೆಬೇನೆಯೂ ಬರುವುದುಂಟು. ಮತ್ತದೇ ಅಸ್ಮಿತೆಯ ಹುಡುಕಾಟ. ಇದರಾಚೆಗೆ ಹೋಗಬೇಕೆನ್ನುವ ತವಕ. ದ್ವಿತ್ವ. 

ಇದು ಬರೇ ಊರು, ಊರ ಜನರಿಗಷ್ಟೇ ಅಲ್ಲ. ಎಲ್ಲ ರೀತಿಯ ಬಂಧನದಿಂದಲೂ ಓಡಿಬಿಡುವ ಆತುರ ಇವನಿಗೆ‌. ಜವಾಬ್ದಾರಿಯ ಹೆದರಿಕೆಯೇ? ಬಂಧನದಲ್ಲಿ‌ ಸಿಲುಕಿದರೆ ಜವಾಬ್ದಾರಿ ಬಂದಾತು. ಜವಾಬ್ದಾರಿ ತಲೆಬೇನೆಯೇ ಎಂದಿಗೂ ಎನ್ನುವ ದುರಾಲೋಚನೆಯೇ? ಅದು ದುರಾಲೋಚನೆಯೇ? ಜೀವನ ಸವೆಸುವ ಸ್ಟ್ರಾಟೆಜಿಯೆ? ಅನಿಯಂತ್ರಿತವಾಗಿಯೇ ವರ್ತಿಸುತ್ತಾನೆ. ಆಸೆಗಳ ಸಾಗರದಲ್ಲೇ ಮಿಂದೇಳುತ್ತಿದ್ದಾನೆ. ಆದರೂ, ಮುಳುಗಿಬಿಟ್ಟರೆನ್ನುವ ಭಯ.‌ ಮುಳುಗಿದ ಮೇಲಿನ ಸ್ಥಿತಿಯ ಕಲ್ಪನೆಯೂ‌ ಉಂಟು. ಹಾಗಾಗಿ. ಅದಕ್ಕಾಗಿ ಬಡಬಡಾಯಿಸುತ್ತಾನೆ - 'ಎಲ್ಲಿ ಬಂಧನದಳುಕಿಲ್ಲವೋ ಅಲ್ಲಿ ನನ್ನ ಕೊಂಡೊಯ್ಯೋ ಪ್ರಭುವೇ ಎಂದು'

ಚಿಕ್ಕಂದಿನ ಪ್ರತೀ ಊರಿಗೂ ಹೋಗಿಬಂದ. ಅರ್ರೆ ಅಷ್ಟು ಸಣ್ಣ ರಸ್ತೆಯಲ್ಲಿ ಹೇಗೆ ಆಡ್ತಿದ್ದೆ ಎನ್ನುವ ಅಚ್ಚರಿ. ಕಣ್ಣಾ ಮುಚ್ಚಾಲೆಯಲ್ಲಿ ತಾನು ಬಚ್ಚಿಟ್ಟುಕೊಳ್ಳುತ್ತಿದ್ದ ಜಾಗದಲ್ಲೆಲ್ಲಾ ಈಗ ಕಟ್ಟಡಗಳು. ಮರುಕ ಪಟ್ಟ‌.  ಮನೆ ವಠಾರದ ಕಾಂಪೌಡು ಹಾರಲು‌ ತಾನು ಜೋಡಿಸಿಟ್ಟ ಕಲ್ಲುಗಳ ಚಿತ್ರ ಬಂದು ನೋಡಲೋಡಿದ. ಅಲ್ಲಿ ಈಗ ಒಂದು‌ ಕಾಂಪ್ಲೆಕ್ಸು ಬಂದದ್ದು ಜಾಗವೇ ತನ್ನದಲ್ಲ ಎನಿಸುವಂತಾಯಿತು.‌ ಅದು ಅವನದ್ದಲ್ಲವೇ ಅಲ್ಲವಲ್ಲ. ಆದರೂ, ತನ್ನದಾಗಿತ್ತೆನ್ನುವ ಭ್ರಮೆಯೇ! ತನ್ನ ನೆನಪಿನ‌ ಆಸ್ತಿಯದು. ಆಸ್ತಿ ಮಾರಾಟವಾಗಿತ್ತು. ಇನ್ನೊಂದೂರಿನ ಮನೆಯ ಮುಂದಿನ ನೆಲ್ಲಿಕಾಯಿ ಮರ ನೆನಪಾಯಿತು. ಓಡಿದ. ನೆಲ್ಲಿಕಾಯಿ ಮರ ಹಾಗೆಯೇ ಇತ್ತು. ಅದರ ಮೇಲೆ ಹತ್ತಿ ನೆಲ್ಲಿ ಕಿತ್ತು ತಿಂದು, ಕೆಳಗಿದ್ದ ಸ್ಬೇಹಿತನಿಗೂ‌ ಬಿಸಾಡಿ ಕಡೆಗೆ ಇಳಿಯಲು ತಿಳಿಯದೇ ಪರಿತಪಿಸಿದ್ದು ನೆನೆದು ನಕ್ಕ. ಅಪ್ಪನ ಬ್ಯಾಂಕಿನ ಜಪ್ತಿ ವಾಹನಗಳೆಲ್ಲಾ ಆ ಮರದ ಕೆಳಗೆ ಇರ್ತಿದ್ದವು. ಅವು ಇದ್ದಷ್ಟೂ ದಿವಸ ಹತ್ತೋದು ಇಳಿಯೋದು‌ ಆತನಿಗೆ ಸುಲಭ. ಜಪ್ತಿಯಾಗಿದ್ದ ಆಟೋದ ಮುಂದಿನ ಇಂಡಿಕೇಟರ್ ಲೈಟ್ ಒಡೆದು ಹಾಕಿ ಅಪ್ಪನ ಬಳಿ ಬೈಗುಳ ತಿಂದದ್ದು ಇಂದಿಗೂ ನೆನಪುಂಟು. ಮತ್ತೊಮ್ಮೆ‌ ನಕ್ಕ. ಪಕ್ಕದ ಅಜ್ಜಿ ಮನೆಗೆ ಕಾಂಪೌಂಡ್ ಹಾರಿ ಹೋಗಿ ಸೀಬೇಕಾಯಿ ಕದಿಯುತ್ತಿದ್ದದ್ದು ನೆನಪಾಗಿ ಓಡಿದ. ಸೀಬೇ ಮರ ಇರಲಿಲ್ಲ. ಅಜ್ಜಿಯ ಮನೆಯ ಹಿಂದಿನ‌ ಅಷ್ಟೂ ಅಂಗಳ ಈಗ ಸಿಮೇಂಟು. ದೇವಸ್ಥಾನದ ತೇರಿನ ಹಿಂದೆ ಯಾರಿಗೂ ತಿಳಿಯದಂತೆ ತಾನೂ ತನ್ನ ಗೆಳೆಯನೂ ಸಿನೆಮಾ ನಾಯಕಿಯರ ಪೋಟೋ ಹಿಡಿದು ಮುತ್ತು ಕೊಡುತ್ತಿದ್ದದ್ದು ಈಗಲೂ ಎಲ್ಲರಿಗೂ ಹೇಳಿ ನಗ್ತಿದ್ದನಲ್ಲ. ಈಗೆಲ್ಲಾ ರಿಪೆರಿಯಾಗಿ, ತೇರಿನ ಜಾಗಕ್ಕೆ ಮುಂದೆ ಒಂದು ದೊಡ್ಡ ಗೇಟು ಸಹ ಮಾಡಲಾಗಿದೆ. ತೇರು ಹಿಂದಿನ ಹಾಗೆ ನಿಲುಕುವುದಿಲ್ಲ!

ನೆನಪುಗಳ ಬಂಧನ‌ ಅತೀ‌ ಬಿಗಿ. ಅಪ್ರಜ್ಞಾಪೂರ್ವಕವಾಗಿ ನೆನಪುಗಳ ಬಂಧನದಲ್ಲಿ‌ ಎಲ್ಲರೂ ಸಿಲುಕಿರಲೇಬೇಕಲ್ಲ. ಆತನಿಗಿನ್ನೂ ಇದು ಅರಿವಿಗೆ ಬಂದಿಲ್ಲ‌. ಅನ್ಯನಾಗಿ‌ ಎಲ್ಲದರಿಂದಲೂ ಓಡಿಬಿಟ್ಟಿದ್ದೇನೆ ಎಂಬ ಭ್ರಮೆಯಲ್ಲಿ ನೆನಪುಗಳ ಬಂಧನದಲ್ಲಿ‌‌ ಸಿಲುಕಿದ್ದಾನೆ. ಹೇಳೋದು ಯಾರು? 

ಸ್ವೇಚ್ಛೆ, ಬಿಡುಗಡೆ, ಮುಕ್ತಿ - ಭ್ರಮೆ!


No comments:

Post a Comment