ಆ ಸಂಜೆ ಮನೆಗೆ ಬರುವ ವೇಳೆಗೆ ಕೊಂಚ ಹೈರಾಣಾಗಿದ್ದ. ಒಂದು ಸರ್ಕಾರೀ ಶಾಲೆಯಲ್ಲಿ ಬೆಳಿಗ್ಗೆ ವಸ್ತು ಪ್ರದರ್ಶನಕ್ಕೆ ಹೋಗಬೇಕಿತ್ತು. ಅಂದೇ ಏಕೆ ಆಯೋಜಿಸಿದ್ದರು? ಆ ಶಾಲೆಯ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಿಗೆ ಅಂದೇ ಆಗಬೇಕಿತ್ತು, ಹಾಗಾಗಿ. ವಸ್ತು ಪ್ರದರ್ಶನಕ್ಕೂ ಮುನ್ನ ಒಂದು ವೇದಿಕೆ ಕಾರ್ಯಕ್ರಮ. ಅಲ್ಲಿ ಈತ ಮಾತನಾಡಬೇಕಿತ್ತು. ಏನು ಮಾತಾಡೋದು? ಹಿಂದಿನ ದಿನ ಸಾಕಷ್ಟು ಯೋಚಿಸಿ ತಯಾರಿಸಿಕೊಂಡಿದ್ದೇನೋ ಹೌದು! ಆದರೆ, ಅದು ಹಳ್ಳಿ! ತನ್ನ ಮಾತು ರುಚಿಸುವುದೇ? ತನ್ನದೇ ಮೌಢ್ಯವೆಂಬಂತೆ ಕಂಡುಬಿಟ್ಟಲ್ಲಿ? ಆ ಎಸ್.ಡಿ.ಎಂ.ಸಿ ಯ ಅಧ್ಯಕ್ಷರು ವೈಚಾರಿಕರಂತೆ ಬಿಂಬಿತಗೊಂಡವರು. ಗ್ರಹಣದ ದಿನ ಗ್ರಹಣದ ಕಥೆಗಳ, ಇತಿಹಾಸದ ಅಂತೆಯೇ ವೈಜ್ಞಾನಿಕ ಆಯಾಮಗಳನ್ನ ತಮ್ಮೂರಿನ ಜನರ ಮುಂದೆ ತೆರೆದಿಡುವುದು ಅವರ ಉದ್ದೇಶವಾಗಿತ್ತು. ಅವರು ಫುಕೋಕನ ದೊಡ್ಡ ಅಭಿಮಾನಿಯಂತೆ. ತೇಜಸ್ವಿಯನ್ನ ಅನುಕರಿಸಿದ್ದೂ ಹೌದಂತೆ. ಕಾರ್ಯಕ್ರಮವೆಲ್ಲಾ ಕಳೆದು ತಮ್ಮ 'ಸಹಜ ಕೃಷಿಯ' ಪ್ರಯೋಗವನ್ನ ತೋರಲಿಕ್ಕೆ ಈತನನ್ನ ತೋಟಕ್ಕೆ ಕರೆದೊಯ್ದಿದ್ದರು. ಈತನೂ ಫುಕೋಕಕನನ್ನ ಮೆಚ್ಚಿದ್ದವನೇ. ಪುಕೋಕನ ಬಗ್ಗೆ ಮೊದಲಿಗೆ ತಿಳಿದದ್ದು ಅದೇ ತೇಜಸ್ವಿಯ 'ಸಹಜ ಕೃಷಿ'ಯಿಂದ. ಕಥೆಗಳಿಗೆ ಹೆಚ್ಚು ಮಾರಿಹೋಗುತ್ತಿದ್ದ ಈತ ಫುಕೋಕನದ್ದೇ ಸಹಜ ಕೃಷಿಯ ಬಗೆಗಿನ ಪುಸ್ತಕ ಕೊಂಡು ತಂದಿದ್ದ. ಸಂಪೂರ್ಣವಾಗಿ ಓದಲಾಗಿರಲಿಲ್ಲ. ತಾನು ಓದಿದ್ದು, ಅದರ ಪ್ರತಿಬಿಂಬವೇ ತನ್ನ ಈ ತೋಟ ಎಂದು ಎಲ್ಲೆಂದರಲ್ಲಿ ಹುಚ್ಚಾಪಟ್ಟೆ ಬೆಳೆದಿದ್ದ ಕಳೆಗಳನ್ನು ತೋರಿಸುತ್ತಾ ಅವರು ನಗುತ್ತಿದ್ದರು. ಬರೇ ಕಥೆಗಳನ್ನ ಕೊಚ್ಚುತ್ತಾ ತಿರುಗುತ್ತಿದ್ದ ಈತ ಒಮ್ಮೆಯಾದರೂ ಈಗ ಮೌನಿಯಾಗಿದ್ದ. ಬ್ರೂನೋ, ಗೆಲಿಲಿಯೋರ ಕಥೆಯನ್ನ ಅಂತೆಯೇ ತಾನು ಕೇಳಿದ್ದ ಕೊಲಂಬಸ್ ನ ಗ್ರಹಣದ ಕಥೆಯನ್ನ ಮಕ್ಕಳಿಗೆ ಹೇಳುತ್ತಾ ಮೌಢ್ಯವನ್ನ ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳುವುದು ನಮ್ಮ ಕರ್ತವ್ಯವೆಂದು ಹೇಳಿದ್ದಕ್ಕೆಯೇ ಆ ಅಧ್ಯಕ್ಷರು ಕಾರ್ಯಕ್ರಮದ ನಂತರ ಈತನೊಟ್ಟಿಗೆ ಆಪ್ತರಾಗಿದ್ದಲ್ಲವೇ?
Saturday, September 20, 2025
ಛಾಯೆ
ಮಧ್ಯಾಹ್ನ ಕಾಲೇಜಿಗೆ ವಾಪಾಸ್ಸಾದ ಮೇಲೆ ಅಧ್ಯಕ್ಷರ ಕೃಷಿ ಪ್ರಯೋಗದ ಬಗೆಗಿನ ಮಾತುಕತೆ ಅನಿಯಂತ್ರಿತವಾಗಿಯೇ ಟೀ ಸಮಯದಲ್ಲಿ ಬಂದಿತು. 'ಒಮ್ಮೆ ಹೋಗೋಣವೇ?' ಕನ್ನಡ ಪ್ರೊಫೆಸರು ಕೇಳಿದರು. 'ನಿಮಗ್ಹೇಗೆ ಪರಿಚಯ?' ಈ ಪ್ರಶ್ನೆ ಸಹಜವೇ. ಬೆಳಗಿನದ್ದನ್ನೆಲ್ಲಾ ಅವರ ಮುಂದೆ ಒದರಿದ. ಅವನು ಒದರುತ್ತಿರುವ ವೇಳೆಗೆಯೇ ಅವರಿಗೆ ತುಸು ನಗು ಬಂದಿತ್ತು - ವ್ಯಂಗ ನಗು. ಇವನಿಗೂ ತಿಳಿಯಿತು. 'ಯಾಕೆ ನಗ್ತೀರಿ?' ಕೇಳಿದ. 'ಮನುಷ್ಯನ ಸ್ವಭಾವ ಇಲ್ಲ ಹೀಗೆ, ಇಲ್ಲ ಹಾಗೆ ಇದ್ದರೆ ಅರ್ಥೈಸಿಕೊಳ್ಳೋರಿಗೆ ಸರಳ' ಅಂತ ಹೇಳಿ ಸುಮ್ಮನಾದರು. ಈತನನ್ನ ಕೊಂಚ ಹತ್ತಿರದಿಂದ ಕಂಡದ್ದಾದ್ದರಿಂದ ಕೊಂಚ ಸಲುಗೆ ಅವರಿಗೆ. ಇವನ ಈ ಪ್ರಶ್ನೆ 'ಏಕೆ ನಗ್ತೀರಿ?' ಅದಕ್ಕೆ ಅವರ ಉತ್ತರ ಹೊಸದೇನಲ್ಲ. ಇದರ ಚರ್ಚೆ ಸಾಕಷ್ಟು ಬಾರಿ ಇಬ್ಬರ ಮಧ್ಯೆ ನಡೆದಿತ್ತು. ಪ್ರತೀಬಾರಿಯೂ ಅವರ ಈ ಉತ್ತರದಿಂದ ಈತ ಕೊಂಚ ಕೆರಳುತ್ತಿದ್ದರೂ, 'ಅದು ನಿಜ. ಆದರೆ ಹಾಗಿರುವುದು ಸರಳವೇ? ಇರಲು ಸಾಧ್ಯವೇ?' ಎಂದು ಹೇಳಿ ಅವನೇ ಚರ್ಚೆಯನ್ನ ಮುಗಿಸಿಬಿಡುತ್ತಿದ್ದ. ಅವರ ಮಾತಿನ ಮರ್ಮ ಈಗ ತಿಳಿಯಿತಾದರೂ, ಟೀ ಹೀರುತ್ತಿದ್ದವ ಮಾತಾಡಲಿಲ್ಲ. ಅವರ ಉತ್ತರದಿಂದ ಮನಸ್ಸು ಸ್ವಪ್ರಲಾಪದಲ್ಲಿ ಮುಳುಗಿತು. ಜೊತೆಗೆ ಬೆಳಗ್ಗೆ ತಂದೆ ಹೇಳಿದ್ದ ಸೂಚನೆಗಳು ನೆನಪಿಗೆ ಬಂದವು -'ಇವತ್ತು ಹೊರಗೆಲ್ಲೂ ತಿನ್ನೋ ಹಾಗಿಲ್ಲ. ಕುಡಿಯೋ ಹಾಗಿಲ್ಲ'. ಊಟ ಮುಗಿಸಿಕೊಂಡೇ ಹೋಗಬೇಕು ಅಂತ ಶಾಲೆಯಲ್ಲಿ ಒತ್ತಾಯಿಸಿದ್ದರಿಂದ, ಅಲ್ಲೇ ಊಟ ಮಾಡಬೇಕಾಗಿ ಬಂದಿತು. ಬಾತು ಮತ್ತು ವಡೆ. ಕನಿಷ್ಠ ಟೀ ಕುಡಿಯೋ ಮುಂಚೆಯಾದರೂ ಆ ಸೂಚನೆ ತಲೆಗೆ ಬಂದಿದ್ದರಾದ್ರೂ ಆಗಲಾದ್ರೂ ಟೀ ಕುಡೀತಿರಲಿಲ್ಲವೇ ಅಂದರೆ ಹಾಗೇನು ಇಲ್ಲ. ಆ ಸೂಚನೆಯನ್ನ ಆತ ಅಷ್ಟೇನು ಗಂಭೀರವಾಗಿ ಪರಿಗಣಿಸದಿದ್ದರೂ, ಮನಗೆ ಹೋದ ಮೇಲೆ ಸುಳ್ಳೇ ಹೇಳಬೇಕಿತ್ತು. ಕನ್ನಡ ಪ್ರೊಫೇಸರರ ಉತ್ತರ, ಹಾಗೆಯೇ ತನ್ನ ಈ ಪರಿಸ್ಥಿಯ ಸುತ್ತಲೇ ಮನಸ್ಸು ಗಿರಕಿ ಹೊಡೆಯಲಾರಂಭಿಸಿತು. ಒಳಗೇ ತನ್ನ ಸಮಜಾಯಿಷಿಗೆ ನಿಂತ. "ಒಬ್ಬ ಶೋಷಿತ ಸಮುದಾಯದವನ ತಪನೆಯಷ್ಟೇ ಶೋಷಣೆ ಮಾಡಿದ ಸಮುದಾಯದವನ ತಪನೆಯೂ ಇದೆ. ಆತನೊಳಗಿನ insecurity ಅಷ್ಟು ಸುಲಭಕ್ಕೆ ಅನುಭವಕ್ಕೆ ನಿಲಿಕದು. ಅವನ ಸುತ್ತಲಿನ ಪರಿಸರದ ಪ್ರಭಾವ ಅಗಾಧ ಮತ್ತು ಹೇಳಲಸದು. ಹೀಗಿರುವಾಗ ಆ ಸಮುದಾಯದ ಪರಿಕಲ್ಪನೆಗಳಲ್ಲೇ, ಆ ಸಮುದಾಯದ ಜೀವನ ಸಾಗರದಲ್ಲೇ, ಅದರ ಅಸ್ಮಿತೆಯಲ್ಲೇ ಬೆಳೆದು ಬಂದವನು ಅದೆಲ್ಲವನ್ನೂ ಸಾರಾಸಟಾಗಿ ಕಳಚಿ, ಬಿಸುಟಿ ಹೊರಡುವ ಕಲ್ಪನೆಯೇ ಇತರರಿಗೆ ಖಂಡಿತವಾಗಿಯೂ ನಿಲುಕದು. ಆ ಭೀತಿ, ಅಭದ್ರತೆ, ಹೇಳತೀರದ ಭಾವ ಸುಲಭದ ವರ್ಣನೆಗೆ ನಿಲುಕುವಂತವೇ?
ಹಾಗಾಗಿ ಮನುಷ್ಯನ ಸ್ವಭಾವವನ್ನ ಇದಮಿತ್ಥಂ ಅಂತ ನಿರ್ಣಯಿಸಿಬಿಡಿವ ದುಡುಕುತನಕ್ಕೆ ಇಳಿಯಕೂಡದು. ಪ್ರತೀ ನಡೆಯ ಹಿಂದೊಂದು ಕಾರಣವುಂಟು. ಆ ಕಾರಣದ ವಿಶ್ಲೇಷಣೆ ಮುಖ್ಯ." ಇದಕ್ಕೂ ಈಗಿನ ಸನ್ನಿವೇಷಕ್ಕೂ ಸಂಬಂಧವೇನು ಎನ್ನುವ ಪ್ರಶ್ನೆಯಂತೂ ಹುಟ್ಟಲಿಲ್ಲ. ಮನಸ್ಸು ಬಂದಂತೆ ಹರಿಯಲು ಬಿಟ್ಟ. ಬಿಟ್ಟ ಎನುವುದಕ್ಕಿಂತ ಅದು ಅವನ ನಿಯಂತ್ರಣದಲ್ಲೂ ಇರಲಿಲ್ಲ. ಮನಸ್ಸು ದಿಕ್ಕೆಟ್ಟು ಹರಿಯುತ್ತಿತ್ತಷ್ಟೇ! "ಇದೊಂದು ಸ್ಪರ್ಧಾತ್ಮಕ ಪರೀಕ್ಷೆಯ ರೀತಿ. ಅಲ್ಲಿ ಪಾಸಾಗೋಕ್ಕಿಂತ ಮುಖ್ಯ ಫಿಲ್ಟರ್ ಮಾಡೋದು. ಹಾಗೆ ಆಳವಾಗಿ ಯೋಚಿಸಿದಾಗ ನನಗೆ ತೀರಾ ಕಾಡುವ ವಿಚಾರ - ಮನುಷ್ಯ ಎದುರಿನವನ ಬಗ್ಗೆ ತನ್ನಲ್ಲೊಂದು ನಿರ್ಣಯಕ್ಕೆ ಬರಲಿಕ್ಕೆ ಮತ್ತೂ ಒಂದು ಬಲವಾದ ಕಾರಣವುಂಟು - ತನ್ನ ಹಾದಿಯಿಂದಿ ಆತನ್ನ ತೊಡೆಯುವುದು. ಹೀಗೆ ಹಣೆ ಪಟ್ಟಿ ಕಟ್ಟುತ್ತಾ ಆತನಿಂದ ತನ್ನ ಅಸ್ಮಿತೆಯನ್ನ ಬೇರ್ಪಡಿಸಿಕೊಳ್ಳುತ್ತಾ ತನ್ನದೇ ಸ್ವಂತ ಅಸ್ಮಿತೆ ಸೃಷ್ಟಿಸಿಕೊಳ್ಳುವ ಯತ್ನ". ಇದ್ಯಾವುದೂ ಮನಸ್ಸಿನ ಹೊರಗೆ ಬರಲಿಲ್ಲ. ಟೀ ಹೀರುತ್ತಿದ್ದ ಅಷ್ಟೇ! ಹೊರಗೆ ಬಂದಿದ್ದರಾದ್ರೂ ಮತ್ತೊಂದು ಚರ್ಚೆ, ಮತ್ತಷ್ಟು ಸ್ವಗತಗಳು ಮೂಡುತ್ತಿದ್ದವಷ್ಟೇ.
ಹೀಗಾಗಿ ಮನಸ್ಸು ಹೈರಾಣಾಗಿತ್ತು. ಕಾಲೇಜಲ್ಲಿ ಬೈಕ್ ಹತ್ತಿದಾಗಿದ್ದ ಪ್ರಜ್ಞೆ ಕೊನೆಗೆ ಮನೆ ತಲುಪಿದಾಗಷ್ಟೇ ತಿರುಗಿತು. ಮಧ್ಯ ಸಿಗ್ನಲ್ ಗಳಲ್ಲಿ ನಿಲ್ಲಿಸಿದ್ದು ಅಥವಾ ರಿಂಗ್ ರೋಡಿನ ಮೇಲೆ ಬಂದೆನೆ ಇಲ್ಲ ಒಳ ಹೊಕ್ಕು ಅದನ್ನ ತಪ್ಪಿಸಿ ಬಂದೆನೆ ಒಂದೂ ಸಹ ನೆನಪಿಲ್ಲ. ಸಹಜವಾಗಿಯೇ ಸುಳ್ಳು ಹೊರಹೊಮ್ಮುತ್ತಿತ್ತು - ಈ ವಿಚಾರದಲ್ಲಿ ತರಬೇತಿ ಬೇಕಿರಲಿಲ್ಲ ಈತನಿಗೆ. 'ಇಲ್ಲ ಎಲ್ಲೂ ತಿಂದಿಲ್ಲ' ಎಂದು ಎದುರಾದ ತಂದೆಗೆ ಸುಳ್ಳು ಹೇಳಿ ಒಳಹೊಕ್ಕ. 'ಥುತ್.. ಈ ನಂಬಿಕೆಗಳು ಇಷ್ಟು ಗಾಢವಾಗಲು ಹೇಗೆ ಸಾಧ್ಯ. ಪ್ರಾಯಶಃ ಇವು ಅಹಂಕಾರದ ವಿಸ್ತರಣೆಯಷ್ಟೇ!' ಎಂದು ಮನಸ್ಸಲ್ಲೇ ಅಂದುಕೊಂಡ. ಏಳು ಗಂಟೆಯೊಳಗೆ ಮನೆಗೆ ಬರಬೇಕೂಂತ ತಾಕೀತಾಗಿತ್ತು. ಗ್ರಹಣಕ್ಕೂ ಎರಡು ಗಂಟೆಯ ಹಿಂದೆಯಿಂದಲೇ ಏನೂ ಆಹಾರ ತೆಗೆದುಕೊಳ್ಳಕೂಡದು ಎಂದಿದ್ದರಿಂದ ಏಳೂವರೆಯ ಒಳಗೆ ಬೇಕಾದ್ದು ತಿಂದು ಮುಗಿಸಿಕೊಳ್ಳಬೇಕಿತ್ತು. "ಹೊಟ್ಟಯೊಳಗಿನ ಅರಗದ ಆಹಾರಕ್ಕೆ ಗ್ರಹಣ ಕಿರಣ ತಾಕಿ ವ್ಯತ್ಯಾಸವಾಗಬೋದೇನೋ' ಎಂದುಕೊಂಡು ನಕ್ಕನಷ್ಟೇ. ಒಂದು ಕಾಫಿ ಮತ್ತು ಬಾಳೆಹಣ್ಣು ಅಷ್ಟೇ ಒಳಗಿಳಿದಿದ್ದು. ಶಾಸ್ತ್ರಿಗಳು ಕೂಗಿದರು - 'ಈ ಎಲ್ಲಾ ದರ್ಬೆ ಚೂರುಗಳನ್ನ ನಿನ್ನ ರೂಮಿನಲ್ಲಿರೋ ಬಟ್ಟೆ, ನೀರಿಗೆ ಹಾಕಿಡು'. 'ಹಾಕ್ತೀಯ?' ಎನ್ನುವ ಡೆಮಾಕ್ರೆಟಿಕ್ ಪ್ರೋಸೆಸ್ಸೇ ಇಲ್ಲವಲ್ಲ ಇಲ್ಲಿ. ತನ್ನ ಕಣ್ಣಿಂದಲೇ ತನ್ನ ಮಗನೂ, ಅವನ ಮಗನೂ ಜಗತ್ತನ್ನ ನೋಡಬೇಕು ಅನ್ನೋದನ್ನ ಸಹಜವಾಗಿಯೇ ಅವರಷ್ಟೇ ನಿರ್ಣಯಿಸಿಬಿಡ್ತಾರೆ. ಮನೆ ಬಿಟ್ಟು ಹೋಗಲು ತೊಡಕುಗಳೂ ಉಂಟು. 'ಹೇಳೋದು ಹೇಗೆ?' ಅದೇ ಮೊದಲ ಪ್ರಶ್ನೆ. 'ತನ್ನ ಮೇಲೆ ಬಂದರೆ' ಎನ್ನುವ ಹೆಂಡತಿಯ ಚಿಂತೆ. ಮೇಲಾಗಿ ವಯಸ್ಸಾದವರಿಬ್ಬರಿಗೂ ಮನೆ ನಿರ್ವಹಣೆ ಕಷ್ಟಸಾಧ್ಯ! "ಇನ್ನೂ ಎಷ್ಟು ವರ್ಷ ಈ ಮೌಢ್ಯ!" ತನಗೇ ಗೊತ್ತಿಲ್ಲದೇ ದನಿ ಏರಿ ಬಿಟ್ಟಿತು. ಒಡನೆಯೇ ಭಯವೂ ಆಯಿತು. "ಹೇಳಿದ್ದು ಮಾಡು. ಮೌಢ್ಯವಂತೆ ಮೌಢ್ಯ. ಸತ್ಯಾಸತ್ಯತೆಯ ಪರಾಮರ್ಶೆ ಮಾಡ್ತಾನೆ ಎಲ್ಲಾ ತಿಳಿದಿರೋನ ಹಾಗೆ. ನಮ್ಮ ಹಿರೀಕರು ತಲೆ ಕೆಟ್ಡಿರೋರೇ ಹಾಗಿದ್ರೆ. ಬಂದು ಕುತುಗೋ ನನ್ನ ಮುಂದೆ. ಎಲ್ಲಾ ಹೇಳಿ ಕೊಡ್ತೇನೆ. ಆಗಲಾದ್ರೂ ಚೂರಾದ್ರೂ ನಮ್ಮ ತನ ಏನೂ ಅನ್ನೋದು ತಿಳೀಬೋದು." ಶಾಸ್ತ್ರಿಗಳು ಗದರಿದರು. ಬಟ್ಟೆ, ಹಾಲು, ನೀರು ಎಲ್ಲಕ್ಕೂ ದರ್ಬೆ ಹಾಕಿ ನಿರುಮ್ಮಳವಾಗಿ ಶಾಸ್ತ್ರಿಗಳು ಮಲಗಲು ಹೊರಡುತ್ತಾ
"ಮಧ್ಯ ರಾತ್ರಿ ಗ್ರಹಣ ಮುಗಿದ ಮೇಲೆ ಒಂದು ಗಂಟೆಗೆ ಸ್ನಾನ ಮಾಡಿ ಚಂದ್ರನನ್ನ ನೋಡಬೇಕು" ಎಂದು ಮತ್ತೊಮ್ಮೆ ಗುಡುಗಿದರು. "ಹುಚ್ಚು ಜನ" ಮನಸ್ಸಲ್ಲೇ ಬೈದುಕೊಂಡ. ತನ್ನದ್ದೂ ಒಂದು ಹಿಪಾಕ್ರೆಸಿ ಇದ್ದಿರಬೋದಲ್ಲ. ಕನ್ನಡ ಪ್ರೊಫೇಸರಿಗೆ ಹೆದರಿರೋದರಿಂದ ಈ ಅಸಹನೆಯೇ? ಎನ್ನುವ ಸಂಶಯವೂ ಸುಳಿಯಿತು.
"ಇದು ಮೌಢ್ಯವಲ್ಲ. ಅಹಂಕಾರ. ಸ್ವಾರ್ಥ, ಬೂಟಾಟಿಕೆ! ಅಮ್ಮ ಹೇಳೋದು ನಿಜವಿರಬೋದೇ? ಇಬ್ಬರಿಗೂ ಜಗಳವಾದಾಗ ಅದೆಷ್ಟು ಬಾರಿ ಆಕೆ ತನ್ನ ಗಂಡನನ್ನ ಬ್ಲಾಕ್ ಮೇಲ್ ಮಾಡಿದ್ದಳು ಅದೂ ಏಕವಚನದಲ್ಲೇ - 'ನಿನ್ನ ಬಂಡವಾಳವೆಲ್ಲಾ ಬಯಲು ಮಾಡಿದ್ರೆ ನಿನ್ನ ಮಕ್ಕಳೇ ನಿನ್ನ ಬಳಿ ಸುಳಿಯೋಲ್ಲ. ನಿನ್ನ ಕಾಯೋದೇ ನನ್ನ ಜೀವನ ಆಗೋಗಿದೆ. ನಿಂಗೆ ನನ್ನ ಕಟ್ಟೋವಾಗಲೇ ನಿನ್ನ ಅಮ್ಮ ನಿನ್ನ ಬಗ್ಗೆ ಎಲ್ಲಾನೂ ಹೇಳಿದ್ರು. ನಿನ್ನ ತಂಗಿಯೂ ನಿನಗೆ ಬರೆದ ಪತ್ರದಲ್ಲಿ ಎಲ್ಲಾನೂ ಹೇಳಿರಲಿಲ್ವೇ. ಇಲ್ಲದಿದ್ರೆ ಆ ಮನೆ ಕೆಲಸದಾಕೇನ ಏತಕ್ಕೆ ಬಿಡಿಸಿದ್ರು. ನಿನ್ನ ದೆಸೆಯಿಂದ ಜೀವನ ಪರ್ಯಂತ ನಿನ್ನ ಕಾಯ್ಕೋತ ಮನೆ ಚಾಕರಿ ನಾನೇ ಮಾಡಬೇಕಾಗಿ ಬಂದೋಯ್ತಲ್ಲ'. ಇಷ್ಟಾಗಿಯೂ ಈ ಮಡಿ ಮೈಲಿಗೆ ಎಲ್ಲವೂ ಒಬ್ಬ ಕಚ್ಚೆಹರುಕನಿಗೇ ಮುಜುಗರ ಅನಿಸೋಲ್ವೇ?" ತನ್ನ ತಾಯಿಯ ದೂರುಗಳನ್ನ ಈತ ಅದ್ಹೇಗೆ ಅರ್ಥೈಸಿಕೊಂಡಿದ್ದನೋ! "ತಮ್ಮ ತಮ್ಮ ಅನುಕೂಲಕ್ಕೆ ತಕ್ಕ ಹಾಗೆಯೇ ಜನರು ಸನ್ನಿವೇಶವನ್ನ ಅರ್ಥೈಸಿಕೊಳ್ಳೋದು" ಅನ್ನೋದನ್ನ ಈತನೇ ಹೇಳುತ್ತಿದ್ದದ್ದು ಅದ್ಹೇಗೆ ಪ್ರಜ್ಞೆಯ ಹಿಡಿತದಿಂದ ಬಿಡಿಸಿ ಓಡಿಬಿಡುತ್ತಿತ್ತು!
ಶಾಸ್ತ್ರಿಗಳಿಗಿಂತ ಹೆಚ್ಚಾಗಿ ಅವರ ಹೆಂಡತಿಯದ್ದೇ ಶಾಸ್ತ್ರದ ವಿಚಾರದಲ್ಲಿ ಹೆಚ್ಚು ಕಾರು ಬಾರು. ಶಾಸ್ತ್ರಿಗಳೂ ಒಮ್ಮೊಮ್ಮೆ ಮಾತಾಡುವ ಹಾಗಿರಲಿಲ್ಲ. ರಾತ್ರಿ ಒಂದೂವರೆಗೆ ಎದ್ದು ಚಂದ್ರನನ್ನ ನೋಡಿ ಮತ್ತೆ ಸ್ನಾನ ಮಾಡಿ ಆನಂತರ ಮತ್ತೊಮ್ಮೆ ಚಂದ್ರನನ್ನ ನೋಡಿ, 'ದಧಿಶಂಖಂ ತುಷಾರಾಭಂ..' ಹೇಳಿ ಕೊಂಚ ಹೊಟ್ಟೆಗೇನಾದ್ರೂ ಇಳಿಸಿ ಮಲಗಬೇಕು ಅಂತ ಅಮ್ಮ ಅಂದಾಗಲೇ ಇವನಿಗೆ ಮೈಯೆಲ್ಲಾ ಉರಿಯುತ್ತಿತ್ತು. ಕೊಂಚ ರೇಗಿದರೂ ದೊಡ್ಡ ಪ್ರಮಾದ. ಮುಂದಿನ ಘೋರ ವಾಗ್ಯುದ್ಧವನ್ನ ನೆನೆದು ಭಯದಿಂದ ಮುಖ ಗಂಟಿಕ್ಕಿಕೊಂಡೇ 'ಹೂಂ...' ಎಂದ. ಅದು ಹೂಂ ಎಂದನೋ ಹೂಸು ಬಿಟ್ಟನೋ ತಿಳಿಯದ ಹಾಗೆ.
ರಾತ್ರಿ ಒಂದೂವರೆಗೆ ಸ್ನಾನ ಮಾಡಿ ಹೊರ ಬಂದಾಗ ಕಾವಲುಗಾರನಾಗೆ ಕಾದು ನಿಂತಂತಿದ್ದ ಅಮ್ಮನಿಗೆ ದೂರದಿಂದಲೇ ತಿಳಿಯಿತು. ಬಿಲದಿಂದ ಹೊರಬರುವ ಮಳೆಹುಳುವನ್ನ ಕೊಕ್ಕೆಂದು ಹಿಡಿಯಲು ಕಾಯುವ ಕೋಳಿಯ ಹಾಗೆ ಅಮ್ಮನಿಗೆ ತಪ್ಪು ಕಂಡು ಹಿಡಿಯೋದು ಎಲ್ಲಿಲ್ಲದ ಪ್ರಿಯ. 'ತಲೆ ಸ್ನಾನ ಮಾಡಿದ್ಯೇನೋ..?'
'ಸ್ನಾನ ಮಾಡು ಅಂದೆ. ತಲೆ ಸ್ನಾನ ಅನಲಿಲ್ವಲ್ಲ'.
'ಅದನ್ನೂ ಯಾರಾದ್ರೂ ಹೇಳಬೇಕೇನೋ' ಮುಖ ಸಿಂಡರಿಸಿಕೊಂಡರು.
'ಏನು ಜನ್ಮವೋ ನನ್ನದು...' ಎಂದು ಮನಸ್ಸಲ್ಲೇ ಹೇಳಿಕೊಳ್ತಾ ಸುಮ್ಮನೆ ನಿಂತಿದ್ದ. ಚಿಕ್ಕಂದಿನಲ್ಲಿ ತಾನು, ತನ್ನ ದೊಡ್ಡಪ್ಪನ ಮಗ ಇಬ್ಬರೂ ಸೇರಿ ಡ್ರ್ಯಾಗನ್ ಪ್ಲೈ ಅನ್ನು ಹಿಡಿದು ಅದರ ಬಾಲಕ್ಕೆ ದಾರ ಕಟ್ಟಿ ತಮ್ಮ ನಿಯಂತ್ರಣದಂತೆ ದೂರ-ಹತ್ತಿರ ಅದನ್ನ ಎಳೆದೆಳೆದು ಆಡಿಸ್ತಿದ್ದರು. ನೆನಪಾಯ್ತು. ಪಾಪ ಲಕ್ಷ್ಮಮ್ಮ ಅಷ್ಟೇನೂ ಕ್ರೂರಿಯಿರಲಿಲ್ಲ. ಅರಿಶಿಣದ ನೀರನ್ನ ತಲೆಯ ಮೇಲೆ ಚಿಮುಕಿಸಿ, 'ಬೆಳಗ್ಗೆ ತಲೆಸ್ನಾನ ಮಾಡು..' ಅಂತ ವಿನಾಯಿತಿ ನೀಡಿದರು. 'ಹೂಂ..' ಎಂದು ಮತ್ತೆ ಹೂಸು ಬಿಟ್ಟವನ ಹಾಗೆ ಹೂಂಕರಿಸಿ ಸುಮ್ಮನೆ ಹೊರಗೆ ಹೋಗಿ ಬಂದ. ಚಂದ್ರನನ್ನ ಕಂಡನೋ ಇಲ್ಲವೋ.
'ಅಪ್ಪ ಚಂದ್ರ ಎಷ್ಟು ದೊಡ್ಡಕಿದ್ದ ನೋಡಿದ್ಯ..' ಮಗ ಕೇಳಿದ.
'ಹೂಂಹೌದಪ್ಪ' ಎಂದು ಹೇಳಿ ಸುಮ್ಮನಾದ.
ಇದಕ್ಕೂ ಮುನ್ನ ಗ್ರಹಣ ಆರಂಭವಾದ ಸಮಯಕ್ಕೆ ಎಲ್ಲರೂ ನಿದ್ದೆಗೆ ರೂಮು ಸೇರಿದ ಸಮಯ ಈತನಿಗೂ ಕೋಪದಲ್ಲಿ ಮೈಯೆಲ್ಲಾ ಉರಿದು ಬಿಸಿ ಏರಿದಂತಾಗಿತ್ತೇನೋ! ರೂಮಿನ ಚಿಲಕ ಹಾಕಿ ಹೆಂಡತಿಗೆ ಹೇಳಿದ - "ಬಾರೇ.. ಇವರ ನಂಬಿಕೇನ ಈ ರಾತ್ರಿ ಸುಳ್ಳು ಮಾಡೋಣ".
ಛೇ..ಛೇ... ಪಾಪ.. ದೂರವೇ ಮಲಗಿ" ಆಕೆ ಉಲಿದಳು.
"ಥುತ್..ಪುಕ್ಕಲಿ ಪುಕ್ಕಲಿ. ಅಥವಾ ಇವಳದ್ದೂ ಬೂಟಾಟಿಕೆಯೆ! " ಅವಳ ನಂಬಿಕೆಗೂ ಅಚ್ಚರಿಪಟ್ಟು ಹಾಸಿಗೆ ಮೇಲೆ ಬಿದ್ದುಕೊಂಡ.
ಇವನು ಬಿದ್ದ ರಭಸಕ್ಕೆ ಮಗ ಹಾಸಿಗೆಯಿಂದ ಹಾರದ್ದೊಂದು ಒಳಿತಾಯಿತು. "ಅಪ್ಪಾ ನಿದ್ದೆ ಬರ್ತಿಲ್ಲ..." ಐದು ವರ್ಷದ ಮಗ ರಾಗ ಎಳೆಯಲಾರಂಭಿಸಿದ.
"ಮುಂಡೇದು ಇನ್ನೂ ಮಲಗಿಲ್ವ. ಬಾರೋ ಚಂದಮಾಮ ತೋರಿಸಿ ಮಲಗಿಸ್ತೀನಿ" ಅಂತ ಸುಮ್ಮನೆ ಮಗನನ್ನ ಹಾಗೆಯೇ ಹೆಂಡತಿಯನ್ನೂ, ರೂಮಲ್ಲಿಲ್ಲದ ಅಪ್ಪ ಅಮ್ಮಂದಿರನ್ನೂ ಇದ್ದಾರೆಂದೇ ಎಂದುಕೊಂಡು ಕಿಚಾಯಿಸಿದ.
"ಇಲ್ಲ. ರಾತ್ರಿ ಒಂದು ಗಂಟೆಗೆ ಸ್ನಾನ ಮಾಡಿ ನೋಡಬೇಕು ಅದು" ಗಂಟೆಗಳ ಅರಿವೂ ಇಲ್ಲದೋನಿಗೆ ಒಳ್ಳೆಯ ಕಂಠಪಾಠ ಮಾಡಿಸಿ ಇಡಲಾಗಿತ್ತು ಆಗಲೇ. ಇವನಿಗೇ ದಂಗಾಯಿತು.
"ಥುತ್..." ನಗುವೂ ಬಂದಿತು.
*****
ಸಮಯಕ್ಕೆ ತಕ್ಕ ಜಾಣ್ಮೆಯೂ ಅಗತ್ಯ ಎನ್ನುವುದೂ ಹಿಂದಿನ ರಾತ್ರಿ ಆತನ ಸ್ಕ್ರಿಪ್ಟ್ ನಲ್ಲಿತ್ತು. ಆದರೆ ವೇದಿಕೆಯ ಮೇಲೆ ಅದರ ಚರ್ಚೆ ಅಥವಾ ಪ್ರಸ್ತಾಪನೆ ಅನುಚಿತವೆಂದು ಬಗೆದು, ಇದಕ್ಕಾಗಿ ಸಾಕಷ್ಟು ಯೋಚಿಸಿದ್ದಂತೂ ಹೌದು. ಅದನ್ನು ವೇದಿಕೆಯ ಮೇಲೆ ಮಾತಾಡಿರಲಿಲ್ಲ. ಪ್ತಸ್ತಾಪಿಸಿದ್ದರೆ ಪ್ರಾಯಶಃ ಆ ಅಧ್ಯಕ್ಷರ ಕೃಷಿ ಪ್ರಯೋಗವೂ ಈತನಿಗೆ ದರ್ಶನವಾಗುತ್ತಿರಲಿಲ್ಲವೇನೋ! ಕನ್ನಡ ಪ್ರೊಫೇಸರ ಕಾಮೆಂಟ್ ಸಹ ಇರುತ್ತಿರಲಿಲ್ಲೇನೋ. ರಿಂಗ್ ರೋಡಿನ ಮೇಲೆಯೇ ಹೋದದ್ದು ನೆನಪಲ್ಲಿರುತ್ತಿತ್ತೇನೋ!
ಚಂದ್ರನನ್ನ ನೋಡಿ ಒಳ ಬಂದಾಗ ಟಿ.ವಿ. ಓಡುತ್ತಿತ್ತು. ಯಾವುದೋ ಬಯಲಲ್ಲಿ, ಮೂರು ದೊಡ್ಡ ನಾಮಗಳನ್ನಿಟ್ಟ ಯಾವುದೋ ಶ್ರೀ.ಶ್ರೀ.ಶ್ರೀ ಯ ಜೊತೆ ಆ ರಾತ್ರಿ ಲೈವ್ ಕಾರ್ಯಕ್ರಮ.
Subscribe to:
Post Comments (Atom)
No comments:
Post a Comment