ಸಂಜೆ ಸುಮಾರು 6:30ರ ಸಮಯ. ಕತ್ತಲು ಬೇಗನೆ ಕವಿದಿತ್ತು. ಮನೆಯಲ್ಲೆಲ್ಲೂ ದೀಪ ಹಚ್ಚಿರಲಿಲ್ಲ. ನಿಧಾನ ಕಣ್ಣು ತೆರೆದ ಸದಾನಂದನಿಗೆ ಎಲ್ಲವೂ ಈ ನಿದ್ರೆಯ ಕನಸಾಗಿರಲಿಲ್ಲವೇ ಎನ್ನುವ ಸಂಶಯವಂತೂ ಸುಳಿಯಿತು. ಕಣ್ಮಿಟುಕಿಸಿದಂತೆ ಒಡನೆಯೆ ಪ್ರಜ್ಞೆ ಗೋಚರಿಸಿತು. ಆಗ್ಗಿಂದ ಕನಸಲ್ಲೋ ಅಥವಾ ನಿಜವೋ ಯಾರೋ ಬಾಗಿಲು ಬಡಿದಂತಿತ್ತು. ಸಾಕಷ್ಟು ಬಾರಿ ಇವನಿಗೆ ಕನಸೋ ನನಸೋ ಎನ್ನುವ ರೀತಿಯಲ್ಲಿ ಘಟನೆಗಳು ಘಟಿಸಿದ್ದುಂಟು. ಒಂದೊಮ್ಮೆ ಬಚ್ಚಲ ಮನೆಯಲ್ಲಿ ಕೂತು ಉಚ್ಚೆ ಉಯ್ಯುವಂತೆ ಕನಸು ಬಿದ್ದಿತ್ತು. ಎಚ್ಚರವಾದಾಗ ಚಡ್ಡಿ ಚೂರು ಒದ್ದೆಯಾಗಿದ್ದು ನೋಡಿ, ತಾನು ಬಚ್ಚಲಲ್ಲಲ್ಲವೇ ಉಯ್ದಿದ್ದು ಎಂದು ಗಲಿಬಿಲಿಗೊಂಡಿದ್ದ. ಈಗಲೂ ಹಾಗೆಯೇ ಯಾಕಾಗಿರಬಾರದು ಅಂತೆನಿಸುತ್ತಿದ್ದಂತೆ ಬಾಗಿಲು ತಟ್ಟಿದ ಸದ್ದಾಯಿತು.
ಕಾಲಿಂಗ್ ಬೆಲ್ ಹಾಳಾಗಿ ವರುಷದ ಮೇಲೆಯೇ ಆಗಿತ್ತು. ಸರಿ ಮಾಡಿಸಬೋದಲ್ಲ ಎಂದು ಹೆಂಡತಿ ಹೇಳಿದಾಗೆಲ್ಲಾ ನಾನೇ ಮಾಡ್ತೇನೆ ತಡಿ ಎಂದು ದೂಡುತ್ತಲೇ ಬಂದಿದ್ದ. ಇನ್ನೂ ಸರಿಯಾಗಿರಲಿಲ್ಲ. ಹೊಸಬರ್ಯಾರಾದರೂ ಮನೆಗೆ ಬಂದರಷ್ಟೆ ಸಮಸ್ಯೆ. ಪರಿಚಯಸ್ಥರು ಒಮ್ಮೆ ಬೆಲ್ಲು ಒತ್ತಿ ಅದು ಕೆಲಸ ಮಾಡದ್ದನ್ನು ನೋಡಿ ಫೋನಿಂದ ಕಾಲೇ ಮಾಡುತ್ತಿದ್ದರು. ಫೋನ್ ವೈಬ್ರೇಟಾಯಿತು. 'ಎಷ್ಟು ಹೊತ್ತಿಂದ ಬಾಗಿಲು ಬಡೀತಾ ಇದೀನಿ.. ಎಲ್ಲಿ ಹೊಕ್ಕಿದೀಯ' ಹೆಂಡತಿಗೆ ಸಹಜವಾಗಿಯೇ ಸಿಟ್ಟು ಬಂದಿತ್ತು. ಅಂದು ಆಕೆ ಕೆಲಸ ಮಾಡುವ ಶಾಲೆಯಲ್ಲಿ ಮಕ್ಕಳ ಕಲಿಕಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೋಗ್ರಾಂ ಇದ್ದದ್ದರಿಂದ ಆಕೆಯೂ ತಡವಾಗಿ ಬಂದಿದ್ದಳು. ಫೋನ್ ಕಟ್ ಮಾಡಿ ನೋಡುತ್ತಾನೆ ಸುಮಾರು 20 ಮಿಸ್ಡ್ ಕಾಲ್. ಅದರಲ್ಲಿ 10ಕ್ಕೂ ಹೆಚ್ಚು ಹೆಂಡತಿಯದ್ದೆ. ಕನಸಲ್ಲಿ ಟ್ರಿಮ್ಮರ್ ಹಿಡಿದು ಗಡ್ಡ ಕೆರೆದುಕೊಳ್ತಿದ್ದ . ವಾಸ್ತವದ ಘಟನೆಯೊಂದು ನಿದ್ದೆಯನ್ನು ಹೊಕ್ಕು ಕನಸಾಗಿ ಇನ್ನೊಂದು ರೂಪದಲ್ಲಿ ಪ್ರಕಟಿತವಾಗೋದೇ ಅಚ್ಚರಿಯೆನಿಸಿತು. ಹುಬ್ಬು ಮೇಲೇರಿಸಿ ಮಹಡಿ ರೂಮಿನಿಂದ ಕೆಳಗಿಳಿದ. ಬನಿಯನ್ನು ಮತ್ತು ಪ್ಯಾಂಟಿನಲ್ಲಿದ್ದ. ಬನಿಯನ್ನು ಅಲ್ಲಲ್ಲಿ ತೂತಾಗಿತ್ತು. ಸ್ವಲ್ಪ ಟೈಟೂ ಸಹ. ಆರೇಳು ವರುಷದ ಹಿಂದಿನದ್ದಿರಬೇಕು. ಹೊಟ್ಟೆ ಉಬ್ಬಿದ್ದರಿಂದ ತುಸು ಹೊಟ್ಟೆಯೂ ಕಾಣುವಂತೆ ಮೇಲೇರಿತ್ತು. ತಲೆ ಕೂದಲು ಕೆದರಿತ್ತು.
'ಯಾಕಿಷ್ಟು ಕತ್ತಲು ಮಾಡಿಟ್ಟಿದಿ' ಹೆಂಡತಿ ಕೇಳುತ್ತಾ ಲೈಟ್ ಹಾಕಿದಳು. 'ದೇವರ ದೀಪವಾದ್ರೂ ಹಚ್ಚಬಾರ್ದೆ..' ಎಂದು ಕೈಕಾಲು ತೊಳೆದು ಬಂದು ದೇವರ ದೀಪ ಹಚ್ಚಲು ಹೋದಳು. 'ಮಲಗಿದ್ಯಾ?' ಯಾರಿಗಾದರೂ ಆತನ ವೇಷವನ್ನು ಕಂಡರೇ ಮೂಡುವ ಪ್ರಶ್ನೆಯೇ ಅದಾಗಿತ್ತು. ಸದಾನಂದ ಮತ್ತು ಸುಮತಿ ಮಾಸ್ಟರ್ಸ್ ನಲ್ಲಿ ಸಹಪಾಠಿಗಳು. ಈತ ಮುಂದೆ ಪಿ.ಎಚ್ಡಿ ಮುಗಿಸಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಫ್ರೊಫೇಸರಾಗಿ ಕೆಲಸಕ್ಕೆ ಸೇರಿದ. ಆಕೆ ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಆತ ಕೆಲಸಕ್ಕೆ ಸೇರಿದಾಗ ವಯಸ್ಸು 29. ಮದುವೆಯಾಗಿದ್ದು 28ಕ್ಕೆ. ಲವ್ ಮ್ಯಾರೇಜ್. ಕೆಲಸಕ್ಕೆ ಸೇರಿ ಒಂದ್ಹತ್ತು ವರುಷಗಳಷ್ಟೇ ಕಳೆದಿರಬೇಕು. ವ್ಯವಸ್ಥೆಯ ಲಯಕ್ಕೆ ಹಸಿವು ಹೆಚ್ಚು. ಹೆಚ್ಚೂ ಕಡಿಮೆ ಅದಕ್ಕೆ ಎಲ್ಲರೂ ಬಲಿಯಾದವರೇ, ಇವನನ್ನೂ ಸೇರಿ. ಆತ ಕೆಳಗೆ ಲೀವಿಂಗ್ ಏರಿಯಾದ ಸೋಫಾದ ಮೇಲೆ ಕಾಲು ಹರವಿ ಕುಳಿತ. ಕಣ್ಣು ಕೊಂಚ ಮುಚ್ಚೇ ಇತ್ತು. ಸ್ಟವ್ ಆನ್ ಮಾಡಿದ ಸದ್ದಂತೂ ಕಿವಿಗೆ ಬಿದ್ದೇ ಇತ್ತು. 'ಇಲ್ಲೂ ಕತ್ತಲಲ್ಲೇ ಕೂತಿದೀಯಲ್ಲ..' ಹೆಂಡತಿ ಕಾಫಿ ಕಾಯಿಸಿ ಬಂದವಳೇ ಲೈಟ್ ಹಾಕಿದಳು. ಮನೆಯಲ್ಲಿಬ್ಬರೆ. ಮೇಲೆ ಕೆಳಗೆ ಎರಡೂ ಸೇರಿ 22 ಚದರದ ಮನೆ. ಮದುವೆಗೂ ಮುನ್ನ ಅಲ್ಲಿದ್ದದ್ದು ಅಪ್ಪ, ಅಮ್ಮ ಈತ ಮೂವರೇ! ಅಷ್ಟೇಕೆ ದೊಡ್ಡ ಮನೆ ಎನ್ನುವ ಕಿಂಚಿತ್ ಆಲೋಚನೆಯೂ ಸುಳಿಯಲಿಲ್ಲ. ಆತ ಅವನಮ್ಮನ ಕೊಳ್ಳುಬಾಕತನವನ್ನ ಎಂದಿಗೂ ಹಾಸ್ಯ ಮಾಡುತ್ತಲೇ ಇದ್ದ. ಅವರಮ್ಮ ಸೀರೆ, ನಗ ಕೊಂಡದ್ದೇ ಕೊಂಡದ್ದು. 'ಇವಳು ಸತ್ರೆ ಇವಳೊಟ್ಟಿಗೆ ಇವನ್ನೂ ಸೇರಿ ಹೂತಾಕ್ಲಿಕ್ಕೆ ಒಂದು 40 - 60 ಸೈಟೇ ಕೊಳ್ಬೇಕೇನೋ ನಾವು. ಮನೆ ಪೂರಾ ಇವಳದ್ದೇ' ಎಂದು ಆಕೆಯನ್ನ ಅವಳಿಗೆ ಗೊತ್ತಾಗದ ಹಾಗೆ ಹಾಸ್ಯ ಮಾಡೋದು ಅಪ್ಪ ಮಗನ ಚಾಳಿಯಾಗಿತ್ತು. ಆದರೆ ಮೂರೇ ಜನಕ್ಕೆ ಅಷ್ಟು ದೊಡ್ಡ ಮನೆ ಯಾಕೆ ಎನ್ನುವ ಪ್ರಶ್ನೆ ಆತನ ತಲೆಗೂ ಬರಲಿಲ್ಲ. ಯಾರೋ ಮೂರನೇರು ಕೇಳಿದಾಗಲೂ ಅದು ಗಂಭೀರವಾಗಿ ತಲೆಗೆ ಹೊಕ್ಕಲಿಲ್ಲ. 'ನೋಡಿ ಸಾರ್. ಬರೆದಿಟ್ಕೋಳಿ. ನೀವು ಈ ಬಾಲ್ಕನಿಗೆ ವರ್ಷಕೊಂದು ಸರೀನೋ ಅಥವಾ ತಿಂಗಳಿಗೆ ಬಂದರೂ ಕ್ಲೀನ್ ಮಾಡೋಕ್ಕೆ ಒಂದು ಸರೀನೋ ಬರ್ತೀರಿ' ಅಂತ ಕಾಂಟ್ರಾಕ್ಟರು ಎಚ್ಚರಿಸಿದ್ದ. ಅದು ಸತ್ಯವೂ ಆಗಿತ್ತು. ಎಲ್ಲವೂ ಬೇಕು ಬೇಕು ಎನ್ನುವ ಆಸೆಯಲ್ಲಿ, ಭವಿಷ್ಯ ಮಂಜಾಗುತ್ತದೆ. ಈಗ ಮನೆಯನ್ನ ಕ್ಲೀನ್ ಮಾಡೋದೇ ಹರಸಾಹಸ. ಕೆಲಸದೋರು ಸಿಕ್ಕ ಹಾಗೆಯೇ. ಒಂದೆರೆಡು ತಿಂಗಳಿಗೆ ಕೆಲಸಕ್ಕೆ ಬಂದೋಳೊಬ್ಬಳು, ಮೂರನೇ ತಿಂಗಳಿಗೆ ಮಾಯ! ಹೀಗೆ ಕೆಲಸದೋರನ್ನ ಹುಡುಕೋದೇ ಕೆಲಸವಾಗೋಯ್ತು. ಕೊನೆಗೆ ಯಾರೂ ಬೇಡಂತ ಇವರೇ ಎಲ್ಲಾ ಮಾಡ್ಕೋಳ್ಳಿಕ್ಕೆ ಶುರು ಮಾಡಿದ್ರು!
ಅಪ್ಪ ಅಮ್ಮ ಈಗಿರಲಿಲ್ಲ. ಮಗಳು ಅಳಿಯನೊಟ್ಟಿಗೆ ಒಂದು ತಿಂಗಳ ಟ್ರಿಪ್ ಗಾಗಿ ಹೋಗಿದ್ದರು.
ತನ್ನ ಹತ್ತೂ ವರ್ಷದ ಕೇರಿಯರ್ ಲಿ ಇದೇ ಹೀಗೆ ಸಂಜೆ ಬೇಗ ಬಂದು ಮಲಗಿದ್ದು ಅಪರೂಪ. ಕಾಲೇಜು 5 ಕ್ಕೇ ಮುಗಿದರೂ ಈತ ಮನೆಗೆ ಬಂದು ಸೇರ್ತಿದ್ದದ್ದು 8ಗಂಟೆಯ ನಂತರವೇ. ಅಷ್ಟೂ ಹೊತ್ತು ಏನುಮಾಡ್ತಿದ್ದ ಅನ್ನೋದು ಅವನಮ್ಮನ ಕಲ್ಪನೆಯ ಹಸಿವಿಗೆ ಒಳ್ಳೆಯ ಆಹಾರ. ಒಂದೆರೆಡು ಬಾರಿ ಇವನನ್ನ ಮೂಸಿದ್ದೂ ಹೌದು. ಏತಕ್ಕಾಗಿ? ಕುಡಿದಿದ್ದಾನೆಂದೇ ಅಥವಾ ಸೇದಿದ್ದಾನೆಂದೆ? ಅಥವಾ ಯಾವುದಾದರೂ ಹೆಣ್ಣಿನ ಸಂಗ ಮಾಡಿದನೆಂದೇ? ಹೆಂಡತಿಗೂ ತನ್ನತ್ತೆಯ ಕಲ್ಪನಾ ಚಿತ್ತ ಪ್ರಭಾವಬೀರಲಿಲ್ಲೆಂದೇನಿಲ್ಲ. ಆಕೆಯೂ ಕೇಳಲಿಕ್ಕಾರಂಭಿಸಿದ್ದಳು - 'ಎಲ್ಲಿದ್ದಿ? ಎಷ್ಟು ಹೊತ್ತಾಗಬೋದು?' ಮೇಲಾಗಿ 'ಯಾಕೆ ತಡ?'
ಇವನು ಇಲ್ಲವೇ ಒಂದಷ್ಟು ಸಮಯ ಬ್ಯಾಡ್ಮಿಂಟನ್ ಆಡ್ತಿದ್ದ ಅಥವಾ ಕಾಲೇಜಿನ ಹೊರತಾದ ತನ್ನಿತರ ಕೆಲಸಗಳನ್ನ ಅಥವಾ ಕೆಲವೊಮ್ಮೆ ಕಾಲೇಜಿನದ್ದೇ ಕೆಲಸಗಳನ್ನ ಹೊತುಗೊಂಡು ಕೂತಿರುತ್ತಿದ್ದ. ಅದೇನು ಕಾಲೇಜಿನಲ್ಲಿ ಬೇರೆಯಾರೂ ಇರಲಿಲ್ಲವೆಂದೇ - ಎಲ್ಲವನ್ನೂ ತಾನೇ ಹೊತುಕೊಂಡು ಮಾಡ್ತೇನೆ ಎನ್ನುವ ದಾರ್ಷ್ಟ್ಯವೇ? 'ಇಡೀ ವ್ಯವಸ್ಥೆಯ ಒಂದು ಸಂಚಿನ ಮಿಕ ನಾನು' ಎಂದು ಈಚೀಚೆಗೆ ಹೆಚ್ಚು ಕೊಸರಿಕೊಳ್ತಿದ್ದ. ತನ್ನ ಜಾತಿಯೇ ತನಗೆ ಮುಳುವಾದದ್ದು ಎಂದೂ ಹಣಿಯುತ್ತಿದ್ದ. 'ಈ ಮುಂದುವರೆದ ಜಾತಿ ಎನಿಸಿಕೊಂಡೋರಿಗೆ ಮಾತ್ರ ಸಮಾಜ ಒಂದು ಜವಾಬ್ದಾರಿಯನ್ನ ಹೊರೆಸಿಬಿಟ್ಟಿದೆ. ಹಿಂದುಳಿದವು ಅಂತ ಅನಿಸಿಕೊಂಡೋರನ್ನ ಯಾವ ಕಾರಣಕ್ಕೂ ಮುಜುಗರಕ್ಕೊಳಪಡಿಸಕೂಡದು. ಅವರಲ್ಲಿ ಯಾವುದೇ insecurityಯನ್ನ ಹುಟ್ಟಿಸಕೂಡದು. ತಾನು ಭಯದಲ್ಲಿ ಮುಳುಗಿ ಸತ್ತರೂ ಕೂಡ!' ಇದು ತನ್ನ ಸುತ್ತವರೆಲ್ಲಾ ತನ್ನ ಮೇಲೆ ಹಗೆ ಸಾಧಿಸೋದಕ್ಕೆ ಮೂಲ ಕಾರಣ ಎಂದು ನಂಬಲಾರಂಭಿಸಿದ. ಎಲ್ಲರೂ ಒಟ್ಟಾಗಿ ಒಂದು ಖೆಡ್ಡಾ ತೋಡಿ ಈತನನ್ನ ಮುಚ್ಚಿ ಹಾಕುವ ಸಲುವಾಗಿಯೇ ವ್ಯವಸ್ಥೆ ರೂಪುಗೊಳ್ತಿದೆ ಎಂದೂ ಹೆದರಿದ. 'ಇನ್ಸೆಕ್ಯುರಿಟಿ ಯಾರಿಗೆ?' ಎನ್ನುವ ಗೊಂದಲ ಈತನನ್ನ ಇನ್ನಷ್ಟೂ ಕುಗ್ಗಿಸಿತು. 'ತನಗಿದ್ದ ಜಾತಿ ಅಹಂಮಿನಿಂದ ಉಳಿದವರನ್ನೆಲ್ಲಾ ಮೂಲೆ ಕಸ ಮಾಡ್ತಿದ್ದೇನಂತ ಅವರೆಲ್ಲಾ ಭಾವಿಸಿ ನನ್ನ ಮೇಲೆ ಹಗೆ ಸಾಧಿರಸಲಾರಂಭಿಸಿದರೆ'? ತನ್ನಮ್ಮನ ಅನಿಯಂತ್ರಿತ ಕಲ್ಪನಾ ಭಿತ್ತಿಯಂತೆ ಈತನದ್ದೂ.
ಮನದ ಪರಿಧಿ ಅನಂತ. ತಾನೊಮ್ಮೆ ಕಾಲೇಜಿನಲ್ಲಿ ಓದ್ತಿದ್ದಾಗ ತನ್ನ ಮಾಸ್ತರು ಕಾಲೇಜಿನ ಮ್ಯಾಗಜೀನಿಗೆ ಒಂದು ಲೇಖನ ಬರೆಯಯ್ಯ ಎಂದು ಕೇಳಿದಾಗ ಬಾಳ ಯೋಚಿಸಿದ್ದ. ಇಷ್ಟೊಂದು self reflective ಆಗೋದು ಒಳ್ಳೇದಲ್ಲಾ ಸದಾನಂದ ಎಂದು ಮೇಸ್ತರು ಸಲಹೆ ನೀಡಿದ್ದರು. 'ತಾನು ತಪ್ಪಾಗದ ಹಾಗೇ, ಒಳ್ಳೆಯ ಗುಣಮಟ್ಟದ್ದು ಬರೆಯಲು ಸಾಧ್ಯವೇ?' ಎಂದು ಯೋಚಿಸ್ತಿದ್ದ. ಎಲ್ಲಕಿಂತ ಹೆಚ್ಚಾಗಿ ತನ್ನ ವರ್ತನೆ, ತನ್ನ ಮಾತು ಮುಂದೇನಕ್ಕೆ ಕಾರಣವಾಗಬೋದು ಎನ್ನುವ ಆಲೋಚನೆ ಚಣಮಾತ್ರದಲ್ಲಿ ಜರುಗಿಸಿಕೊಳ್ಳೋದು ಕರಗತವಾಗಿಹೋಗಿತ್ತು. ಚಿಕ್ಕಂದಿನಿಂದ ಅಮ್ಮ ಹೊಡೆದೂ ಬಡೆದೂ ಓದಿಸ್ತಿದ್ದಳು. ತಂದೆ ಬ್ಯಾಂಕಿನ ಉದ್ಯೋಗಿಯಾದ್ದರಿಂದ ವರ್ಗಾವಣೆಯಾಗುತ್ತಿತ್ತು. ಹಳ್ಳಿಯಿಂದ ಸಿಟಿಗೆ ಬಂದರು. ಯೂ.ಕೆ.ಜಿ. ಸೇರಬೇಕಿತ್ತು. ಆದರೆ ಈತನಿಗೆ ಏನೂ ಓದಲಿಕ್ಕೆ, ಬರೆಯಲಿಕ್ಕೆ, ಕನಿಷ್ಠ ಸರಿಯಾಗಿ ಮಾತಾಡಲಿಕ್ಕೂ (ಅವರ ಲೆಕ್ಕದಲ್ಲಿ ಮಾತಾಡೋದು ಅಂದರೆ ಪದ್ಯ ಹೇಳೋದು, rhymes ಹೇಳೋದು, ಅವರು ತೋರಿದ ವಸ್ತುವಿನ ಹೆಸರು, ಅದರ ಬಗ್ಗೆ ಹೆಳೋದು) ಬರದ ಕಾರಣ ಆತನನ್ನ ಹಿಂದಿನ ತರಗತಿಗೇ ಕೂರಿಸಿದರೂ. ಅದಕ್ಕೆ compensation ಎಂಬಂತೆ ಆತನ ಜನ್ಮವರ್ಷವನ್ನೂ ಒಂದು ವರ್ಷ ಮುಂದಕ್ಕೆ ತಿದ್ದಿದರು. 'ನಿಮ್ಮ ವಿದ್ಯೆಯಿಂದಲೇ ನಾವು ಸಮಾಜದಲ್ಲಿ ನಮ್ಮನ್ನೆಲ್ಲಾ ಕೀಳಾಗಿ ಕಾಣ್ತಿದ್ದ ಜನರ ಮಧ್ಯ ತಲೆ ಎತ್ತಿ ಬದುಕಬೇಕಿತ್ತು' ಎಂದು ಅವನಮ್ಮ ಆಗಾಗ್ಗೆ ಹೇಳ್ತಿದ್ದಳು. ಹಾಗಾಗಿ ಹೊಡೆದೂ, ಬಡೆದು ಹೇಗೋ ಕ್ಲಾಸಿಗೇ ಮೊದಲು ಬರೋ ಹಾಗೆ ಮಗ, ಮಗಳನ್ನ ತಯಾರು ಮಾಡ್ತಾ ಹೋಗಿದ್ದಳು ಆತನ ತಾಯಿ. ಇದರ ಫಲವಾಗಿ ಎಸ್. ಎಸ್. ಎಲ್.ಸಿಯಲ್ಲಿ ಜಿಲ್ಲೆಗೇ ಪ್ರಥಮ ಬಂದಿದ್ದ ಸದಾನಂದ. ಯೂನಿವರ್ಸಿಟಿಗೆ ಅಲ್ಲಿಯವರೆಗೂ ಕೇಳಿರದಷ್ಟು ಗೋಲ್ಡ್ ಮೆಡಲ್ ಬಾಚಿಕೊಂಡು ರ್ಯಾಂಕ್ ಪಡೆದವ. ಮನುಷ್ಯನ ಮೂಲಭೂತ ವರ್ತನೆಗೆ ಕಾರಣವನ್ನು ಹುಡುಕುವುದು ಈತನಿಗೆ ಹೆಚ್ಚು ಆಕರ್ಷಿಸಿದ್ದೇ ತನ್ನ ವರ್ತನೆಯ ಹಿಂದಿನ ಕಾರಣದ ಹುಡುಕಾಟದಲ್ಲಿ ಇಳಿದುಬಿಡುತ್ತಿದ್ದ. ಬಾಲ್ಕನಿ ಹೆಚ್ಚಾಗಿ ಉಪಯೋಗಕ್ಕೆ ಬಂದದ್ದೇ ಈ ಸಮಯದಲ್ಲಿ. ಈಸಿ ಚೇರಿನ ಮೇಲೆ ಕೂತು ಹಾಗೆಯೇ ಕಣ್ಣು ಮುಚ್ಚಿ ಕುಳಿತು ಬಿಡುತ್ತಿದ್ದ. ಕೈಯಲ್ಲೊಂದು ಪುಸ್ತಕ ಇದ್ದರೂ ಅದು ಮುಚ್ಚಿಯೇ ಇರುತ್ತಿತ್ತು. 'ಪ್ರಾಯಶಃ ತನ್ನ ಬಾಲ್ಯದಿಂದಲೇ ತಾನು ಮೊದಲೇ ಇರಬೇಕೆನ್ನೋ ಹಮ್ಮನ್ನ ತನ್ನೊಳಗೆ ಬಿತ್ತಿ, ನೀರೆರೆದು, ಚಿಗುರಿಸಿ ಹೆಮ್ಮರವಾಗಿ ಬೆಳೆಸಲಾಗಿದೆ. ಯಾರು? ಬೆಳೆಸಿದ್ದು ಯಾರು? 'ನಿಮ್ಮ ಮಗು ಸಮಾಜದ ಮಗು' ಎನ್ನುವ ಖಲೀಲ್ ಗಿಬ್ರಾಲನ ಮಾತುಗಳಂತೆ ಸಮಾಜವೇ ಬಿತ್ತಿದ್ದೆ? ವ್ಯವಸ್ಥೆಯೇ ಬಿತ್ತಿದ್ದೇ? ಅಥವಾ ಅವನ ತಾಯೇ? ಅಥವಾ ಸ್ವತಃ ಅವನೇ?
'ತಾನೇ ಎಂದಿಗೂ ರಂಗಸ್ಥಳದ ಕೇಂದ್ರಬಿಂದುವಾಗಿರಬೇಕೆಂಬ ಇಚ್ಛೆಯೂ ಆ ಅಹಂಮ್ಮಿನ ಮರದ ಫಲವೇ? ಹೀಗಾಗಿಯೇ ಸುತ್ತಲಿನವರಿಗೆ ತನ್ನ ಮೇಲಿನ ಅಸಹನೆಯೇ?' ಪದೇ ಪದೇ ತನ್ನ ಮಾಸ್ತರರ ಮಾತುಗಳೂ ಸಹ ರಿಂಗಣಿಸುತ್ತಿದ್ದವು. ಇವು ಯಾವುವೂ ಸಹ ನಿಯಂತ್ರಿತವಲ್ಲ. ಈ ಗೋಳು ನಾಲ್ಕು ಜನರಿಗೆ ನಗೆಪಾಟಲಿನ ವಸ್ತುವೇ ಸರಿ!
ಸದಾನಂದನ ಮನದ ತುಮುಲಗಳು ಅವನ ಹೆಂಡತಿಗೂ ತಿಳಿದಿತ್ತು. ಸಾಕಷ್ಟು ಬಾರಿ ಮುಕ್ತವಾಗಿ ತನ್ನ ಬಗ್ಗೆಯೂ ಎಲ್ಲಾ ಬಿಚ್ಚಿಟ್ಟಿದ್ದ. Counsellingಗೆ ಹೋಗ್ತೀಯ? ಹೆಂಡತಿಯೂ ಸಲಹೆ ನೀಡಿದ್ದಳು. 'ಅವರು ಏನು ಹೇಳಿಯಾರು? ಸಮಾಧಾನ ಮಾಡಿ ಕಳಿಸಬೋದು ಒಂದೆರೆಡು ಗುಳಿಗೆಗಳೊಟ್ಟಿಗೆ. ನನ್ನ ಮೂಲಭೂತ ವರ್ತನೆಗೆ ನಾನೇ ಔಷಧ ಕಂಡುಕೊಳ್ಳಬೆರಕಲ್ಲ' ಅಂತ ಸಮಜಾಯಿಷಿ ನೀಡಿ ಸುಮ್ಮನಾಗಿದ್ದ. ಹಾಗಾಗಿ ಆಕೆಗೂ ಅಂದಾಜಾಗಿತ್ತು ಇಂದು ಕಾಲೇಜಿನಲ್ಲೆನೋ ಜಗಳವೋ ಏನೋ ನಡೆದಿರಬೋದೆಂದು. ಒಂದೆರಡು ದಿನಗಳಿಂದ ಸದಾನಂದ ಏನನ್ನೋ ಗೀಚುತ್ತಾ ಕೂತಿದ್ದ. ನಾರಾಯಣ್ ರ ಇಂಗ್ಲೀಷ್ ಟೀಚರ್ ನ ಹಾಗೆ. ಗೀಚುವುದು, ಹರಿಯುವುದು, ಕೊನೆಗೆ ಸುಡುವುದು. ತಾನು ಸಾಕಷ್ಟು ಹಿಂದೆ ಈ ಸರ್ಕಾರಿ ವ್ಯವಸ್ಥೆಯೊಳಗಿನ ದುಃಸ್ಥಿತಿಯನ್ನ ಕಂಡು ಬರೆದಿದ್ದದ್ದನ್ನೇ ಹುಡುಕಿ ಮತ್ತೇ ಬರೆದ. ಮತ್ತೆ ಹರಿದ. ತನ್ನ ಮನಸ್ಸಿನ ತುಮುಲವನ್ನ ಒತ್ತಿದ. ಮತ್ತೆ ಹರಿದ. ಏನೂ ಸಹ ತೃಪ್ತಿಯಾಗದೇ ಕೊನೆಗೆ ನಾಲ್ಕು ಸಾಲುಗಳಲ್ಲೇ ಬರೆದು ಮುಗಿಸಿದ.
ಆತನ ಹೆಂಡತಿ ಇದನ್ನು ಊಹಿಸಿದ್ದಿರಲಿಲ್ಲ. ಕಾಲೇಜಿನಲ್ಲಿ ಪ್ರಾಂಶುಪಾಲರ ಟೇಬಲ್ಲಿನ ಮೇಲೆ ಪತ್ರವನ್ನ ಇಟ್ಟು ಹೊರನಡೆದ. 'ಏನಿದು?' ಅಂತ ಕೇಳಲಿಕ್ಕೆ ಅವರು ಅಲ್ಲಿರಲಿಲ್ಲ. ಅವರ ಛೇಂಬರಿನಿಂದ ಆಚೆಗೆ ಸೀದಾ ತನ್ನ ಕಲೀಗ್ಸ ಗಳ ಛೇಂಬರಿನ ಕಡೆಗೆ ಹೊರಡಬೇಕೆನಿಸಿತು. ಕೊನೆಯದಾಗಿ ಅವರಿಗೊಂದು ಮಾತು ಹೇಳಬೇಕಾಗಿ. ಮೊದಲು ಲೈಬ್ರಿರಿ ಕಡೆಗೆ ಕಾಲು ಹೊರಳಿತು. ಒಮ್ಮೆಲೆ ನಿಂತ. ದಾರಿ ತಿರುಗಿತು. ಸೀದಾ ಹೊರ ಬಂದು ಬೈಕ್ ಹತ್ತಿ ಮನೆಗೆ ಬಂದ. ಫೋನ್ ವೈಬ್ರೇಟಿಗೆ ಹಾಕಿ ಸೀದಾ ರೂಮಿಗೆ ನಡೆದು ಮಲಗಿದ.
No comments:
Post a Comment