Thursday, January 11, 2024

ಪರಿ'ಭ್ರಮ'ಣೆ

ಖಾಲೀ ಇದ್ದ ರಸ್ತೆಯಲ್ಲಿ ಕಾರಿನ ವೇಗ ತಗ್ಗಿಸಿ ನಿಧಾನಕ್ಕೆ ಹೋಗುತ್ತಿದ್ದಾಗಲೇ ರಮೆಗೆ ಅನುಮಾನ ಬಂದಿತು - ಕಿಟ್ಟಿ ಏನೋ ಗಹನವಾದ ಆಲೋಚನೆಯಲ್ಲಿದ್ದಾನೆಂದು. ಚಳಿಗಾಲದ ಮುಂಜಾವು. ಕಿಟಕಿಗಳೆಲ್ಲಾ ಏರಿಸಿದ್ದವು.  ಕಾರು ರಮೆಯ ತವರಿನ ಕಡೆ ಹೊರಟಿತ್ತು. ರೋಡು ಎಷ್ಟೇ ಹಾಳಾಗಿದ್ದರೂ, ಮೈಸೂರಿನಿಂದ ಶಿವಮೊಗ್ಗಕ್ಕೆ ಕೆ.ಆರ್. ಪೇಟೆ ಮುಖಾಂತರವೇ ಕಿಟ್ಟಿ ಹೋಗ್ತಿದ್ದದ್ದು. ಕೆ.ಆರ್.ಪೇಟೆ ದಾಟುವವರೆಗೂ, ರೋಡುಗಳ ಸ್ಥಿತಿಗೆ ಈತ ಬೈದುಕೊಳ್ಳೋದೂ ಸಹ ಪ್ರತೀ ಪ್ರಯಾಣದ ಅಂಗವಾಗಿಹೋಗಿತ್ತು. ಬಹಳ ಸಾರಿ ತಮಾಷೆಯೂ ಮಾಡ್ತಿದ್ದ, ನಾನು ಕಣ್ಣು ಮುಚ್ಚಿ ಓಡಿಸಿದ್ರೂ ಹೇಳಬಲ್ಲೇ ಕೆ. ಆರ್. ಪೇಟೆ ಮುಗಿಸಿ ಹಾಸನ ಜಿಲ್ಲೆಯ ರೋಡಿಗೆ ಗಾಡಿ ಇಳಿದದ್ದನ್ನ ಎಂದು‌. ಆದರೆ ಇತ್ತೀಚೆಗೆ ಎಲೆಕ್ಷನಿನ ಆಸುಪಾಸು ರೋಡಿನ ಹಳ್ಳಗಳಿಗೆಲ್ಲಾ ಅಲ್ಲಲ್ಲಿ ತೇಪೆ ಹಚ್ಚಿ ಪ್ರಯಾಣ ಅಷ್ಟೇನು ಪ್ರಯಾಸಕರವಾಗದಿರುವಂತೆ ರೋಡನ್ನ ಸಿದ್ಧಗೊಳಿಸಿದ್ದರು‌.

ರಮೆ ಸೀಟನ್ನ ಹಿಂದಕ್ಕೆ ಬಾಗಿಸಿ, ಮೂರು ವರ್ಷದ ಮಗುವನ್ನ ಹೆಗಲ ಮೇಲೆ ಹಾಕ್ಕೊಂಡು ಮಲಗಿದ್ದಳು. ಕಾರೊಳಗೆ ಬೆಚ್ಚಗಿದ್ದ ಕಾರಣವೋ, ಬೆಳಗ್ಗೆ ಬೇಗ ಎದ್ದ ಕಾರಣವೋ ನಿದ್ದೆ ಆವರಿಸಿಬಿಟ್ಟಿತ್ತು.

 

ಕಿಟ್ಟಿ ಏನನ್ನ ಆಲೋಚಿಸ್ತಿದ್ದಾನೆಂದು ಆಕೆಗೂ ತಿಳಿದಿತ್ತು. ಗೇರಿನ ಮೇಲಿದ್ದ ಆತನ ಕೈ ಮೇಲೆ ಕೈ ಇಟ್ಟು ಹೇಳಿದಳು - 'ಹೋಗಲಿ ಬಿಡು. ಯೋಚಿಸ್ಬೇಡ ಜಾಸ್ತಿ. ಆಗೋದು ಆಗೇ ಆಗತ್ತೆ. ಏನಾದ್ರೂ ಆಗಲಿ ನಾವೆಲ್ಲಾ ಇರ್ತೀವಲ್ಲ ನಿನ್ನ ಜೊತೆ'.

'ಹಂ...' ಎಂದು ಹೂಂಕರಿಸಿದ್ದಷ್ಟೇ ಕಿಟ್ಟಿ. 'ತಿಂಡಿ ಅರಸೀಕೆರೆ ಮುಗಿಸಿ ಮಾಡೋಣ್ವೆ?' ಮಾತು ಬದಲಾಯಿಸಿದ.  ಸಾಮಾನ್ಯವಾಗಿ ಪ್ರತೀ ಬಾರಿ ಊರಿಗೆ ಹೋಗುವಾಗ ಮನೆಯಿಂದಲೇ ತಿಂಡಿ ತಂದು ಬಿಡುತ್ತಿದ್ದರು. ಊಟದ ಸಮಯಕ್ಕೆಲ್ಲಾ ರಮೆಯ ಮನೆ ತಲುಪಿರುತ್ತಿದ್ದರು. ತಿಂಡಿಯೆಂದರೆ ಚಪಾತಿಯೇ ತರುತಾ ಇದ್ದದ್ದು ಯಾವಾಗಲೂ. ಕಿಟ್ಟಿಗೆ ಚಪಾತಿಯೊಟ್ಟಿಗೆ ಟಮೋಟೊ ಗೊಜ್ಜೇ ಆಗಬೇಕು. ಹಾಗಾಗಿ ಹಿಂದಿನ ರಾತ್ರಿಯೆ ರಮೆ ಚಪಾತಿ, ಗೊಜ್ಜನ್ನ ಮಾಡಿಟ್ಟಿರುತ್ತಿದ್ದಳು.

 

ರಮೆಯ ಊರು ಸಾಗರದೊಳಗಿನ ಒಂದು ಹಳ್ಳಿ. ದಟ್ಟ ಮಲೆನಾಡೇನಲ್ಲ ಅದು. ಆದರೂ ಮನೆಯ ಸುತ್ತಮುತ್ತೆಲ್ಲಾ ಇರೋದು ಕಾಡಲ್ಲ ಅಂತ ಹೇಳಲಿಕ್ಕೂ ಆಗೂದಿಲ್ಲ. ಶರಾವತಿ ಹಿನ್ನೀರಿನ ದಡದಲ್ಲಿ ಆಕೆಯ ತಾಯಿ ಮನೆ. ಕಿಟ್ಟಿ ರಮಾ ಒಬ್ಬರನ್ನೊಬ್ಬರು ಇಷ್ಟ ಪಡ್ತಿದ್ದಾಗಲೇ ಒಮ್ಮೆ ಕಿಟ್ಟಿ ಇಲ್ಲಿಗೆ ಬಂದಿದ್ದ. ಈ ರೀತಿಯ ಮಲೆನಾಡಿನ ಪರಿಚಯ ಅದೇ ಮೊದಲು ಆತನಿಗೆ. ಆಗಷ್ಟೇ ಕೊಂಡ ನಿಕಾನ್ ಡಿಎಸ್ಎಲ್ ಆರ್ ಕ್ಯಾಮೆರಾವೂ ಜೊತೆಗಿತ್ತು. ಆಗ ಮಳೆಗಾಲ. ಮಳೆ ಜಿಟಿಯುತ್ತಲೇ ಇತ್ತು. ಒಂಥರಾ ಚಳಿ. ಆ ವಾತಾವರಣಕ್ಕೆ ಕಿಟ್ಟಿಯ ಮೈಯೊಳಗೆ ಹತ್ತಿದ ಜೋಂಪಿಗೆ, ಬೇರೇನೂ ಮನಸ್ಸನ್ನ ಆಕ್ರಮಿಸದೆ ಆತ ಅಲ್ಲಿದ್ದಷ್ಟು ದಿವಸವೂ ಅತ್ಯಂತ ನೆಮ್ಮದಿಯಿಂದಿದ್ದ. ಮೊದಲ ಬಾರಿಗೆ ಜೀವನದಲ್ಲಿ ಕಿಟ್ಟಿ ಕಗ್ಗತ್ತಲನ್ನ ಕಂಡ ದಿನಗಳವು. ಸಿಟಿಯ ಜೀವನದಲ್ಲಿ ಕತ್ತಲು ಎನ್ನುವುದು ಕೇವಲ ಪ್ಯಾಂಟಸಿ ಕಥೆಗಳ ಕಥಾವಸ್ತುವಾಗಿತ್ತು. ಜಿಟಿ ಮಳೆಯ ನಡುವೆ ಸಿಕ್ಕ ವಿರಾಮದಲ್ಲಿ ಮನೆಯ ಪಕ್ಕದ ಗುಡ್ಡಕ್ಕೆ  ಕ್ಯಾಮೆರಾ ಹಿಡಿದು ಹೊರಟರೆ, ಅದೇ ಜೋಂಪು ಆತನಿಗೆ ಫೋಟೋ ತೆಗೀಲಿಕ್ಕೆ ಆಸ್ಥೆ ನೀಡದೆ ಸುಮ್ಮನೆ ಅಲ್ಲೆ ಒಂದು ಮರದ ದಿಮ್ಮೆಯ ಮೇಲೋ, ಕಲ್ಲಿನ‌ ಮೇಲೋ ಹಾಗೆ ಎತ್ತಲೋ ದಿಟ್ಟಿಸುತ್ತಾ ಕುಳ್ಳಿರಿಸಿಬಿಡುತ್ತಿತ್ತು. ಕಿಟ್ಟಿಗೆ ಕ್ಯಾಮೆರಾ ಹುಚ್ಚೇನು ಇರಲಿಲ್ಲ. ತೇಜಸ್ವಿಯ ಮಾಯಾಲೋಕವನ್ನೊಮ್ಮೆ ಓದಿದ ಮೇಲೆ ಅವನಿಗೆ ಬಂದ ಅಹಂಕಾರದಲ್ಲಿ ತಾನೂ ಸಹ ಇನ್ನೊಂದು ತೇಜಸ್ವಿಯೇ ಎನ್ನುವ ವಿಶ್ವಾಸದಲ್ಲಿ ಕೊಂಡ ಕ್ಯಾಮೆರಾ ಅದು. ಆದರೆ ತೆಗೆಯುವ ಪ್ರತೀ ಫೋಟೋದಲ್ಲೂ ಆತನಿಗೇನೋ‌ ಕೊರತೆ ಎದ್ದು ಕಾಣುತ್ತಿತ್ತು. ಕ್ಯಾಮೆರಾ ಮುಖಾಂತರ ನೋಡೊದು ನಮ್ಮ ಕಣ್ಣೇ ಅಲ್ಲವೇ? ಕಣ್ಣು ಮನಸ್ಸು ತೋರಿದ್ದನ್ನ. ಆದರೂ ಇನ್ನೂ ಆತ ಕ್ಯಾಮೆರಾವನ್ನೂ ಬಿಟ್ಟಿಲ್ಲ. ಕಾರಿನ ಹಿಂದಿನ ಸೀಟಲ್ಲೇ ಬ್ಯಾಗಿಂದ ಹೊರಗೆ ತೆಗೆದು ಇಟ್ಟಿರುತ್ತಾನೆ, ದಾರಿಯಲ್ಲೇನಾದರೂ ಅದ್ಭುತವಾದ್ದು ಕಂಡರೆ ಸೆರೆ ಹಿಡಿಯಲಿಕ್ಕೆ.

 

ಕಿಟ್ಟಿಯ ಮನಸ್ಸು ಮತ್ತೆ ಗಿರಕಿ ಹೊಡೆಯುತ್ತಾ ಅದೇ ವಿಷಯದ ಸುತ್ತಾ ಸುತ್ತಲಾರಂಭಿಸಿತು. ಕಾಲೇಜಿನಲ್ಲಾದ ಸಾಕಷ್ಟು ವಿದ್ಯಮಾನಗಳು ಅವನ ಮನಸ್ಸನ್ನು ಕೊಂಚ ಮಟ್ಟಿಗೆ ಕದಡಿದ್ದವು. ಕಾಲೇಜಿಗೆ ಕೆಲಸಕ್ಕೆ ಸೇರಿ‌ ಮೂರು ವರ್ಷಗಳು ಕಳಿತಾ‌ ಬಂದಿದ್ದವು. ಈ‌‌ ಕೆಲಸಕ್ಕೆ ಸೇರೋ‌ ಮುನ್ನ ಕಿಟ್ಟಿಯ ಮನಸ್ಸಲ್ಲೂ ಆಸೆ ಉದಯಿಸಿದ್ದು ನಿಜ - ಸಿಕ್ಕರೆ ಚೆನ್ನ ಎಂದು. ತುಂಬಾ ವರ್ಷಗಳಿಂದ ಆತ ಹಾತೊರೀತಿದ್ದ ಜೀವನ ಕೈ ತುದಿಯಲ್ಲೇ ದೊರೆತಂತೆ ಅನಿಸಿ‌ತು. ಒಂದು ಕಾಲೇಜಿನಲ್ಲಿ ಪಾಟ ಮಾಡೋ ಕೆಲಸ. ಪಾಟ ಆದಮೇಲೆ ತನ್ನ ಓದು ಹಾಗೂ ಬರವಣಿಗೆ. ನಡುವೆ ರಜಾ ದಿನಗಳಲ್ಲಿ ಸುತ್ತಾಟ. ಓದಿ ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕೆಂದಲ್ಲ. ತನ್ನನ್ನ ತಾನು ಇನ್ನಷ್ಟು ಮರೀಲಿಕ್ಕಾಗಿ ಓದು ಅದು - ಒಂದು ರೀತಿ‌ ಅಫೀಮಿನಂತೆ. ಕಿಟ್ಟಿ ಮದುವೆಗೂ ಮುನ್ನವೇ ಈ ಆಸೆಯೊಂದನ್ನ ಬೆಳೆಸಿಕೊಂಡಿದ್ದ. ಆತ ಬಹಳ ಸೀರಿಯಸ್ ಆಗಿದ್ದ ಕೂಡ. ಇದಕ್ಕಾಗಿ ಸೂಕ್ತವಾದ ಊರೆಂದರೆ ಚಿಕ್ಕಮಗಳೂರೇ ಎಂದೆನಿಸಿ, ಚಿಕ್ಕಮಗಳೂರಿನಲ್ಲೇ ಸೆಟಲ್ ಆಗೋಣೂಂತ ತಂದೆ ತಾಯಿಯರನ್ನೂ ಒಪ್ಪಿಸಿ, ಅವರೂ ಆತನ ಭ್ರಮೆಯ ಭಾಗಿಗಳಾಗಿ ಹೋದರು. ಮೈಸೂರನ್ನ ಸಂಪೂರ್ಣವಾಗಿ ತ್ಯಜಿಸಿ ಗುರುತ ಪರಿಚಯವೇ ಇಲ್ಲದ ಚಿಕ್ಕಮಗಳೂರಿಗೆ ಗುಳೆ ಹೊರಟಂತೆ ಹೊರಡಲು ಸರ್ವರೂ ಸನ್ನದ್ಧರಾಗಿ ನಿಂತರು. ಕಿಟ್ಟಿಯ ಅಪ್ಪ ಅಮ್ಮನಿಗೆ ಇಂದು ಅಚ್ಚರಿಯಾಗ್ತದೆ, ಆ ಭ್ರಮೆ ತಮ್ಮಲ್ಲೇಗೆ ಹೊಕ್ಕದ್ದು ಎಂದು.

ಚಿಕ್ಕಮಗಳೂರಿನ ಗಾಂಧೀನಗರದಲ್ಲಿ ಒಂದು ಮನೆಯನ್ನೂ ನೋಡಿ, ಅದಕ್ಕೆ ಟೋಕನ್ ಅಡ್ವಾನ್ಸ್ ಸಹ ನೀಡಿ, ಅಗ್ರೀಮೆಂಟಿಗೆ ಎಲ್ಲವೂ ಸಿದ್ಧವಾಗಿತ್ತು. ಇದಕ್ಕಿದ್ದ ಹಾಗೆ ಕಿಟ್ಟಿಯ ತಂದೆಗೆ ಮೈಸೂರಿನ ಪಾಷ ಎಳೆದುಬಿಟ್ಟಿತು. ಜೊತೆಗೆ ಅವು ಡಿಮಾನೆಟೈಸೇಷನ್ ದಿನಗಳು. ವ್ಯವಹಾರವೂ ಕಷ್ಟವಾಯಿತು. ಕಿಟ್ಟಿಗೆ ಬೇಸರವಾಗಿದ್ದು ನಿಜ - ಎರಡೆರೆಡು ಬಾರಿ ಅಲ್ಲಿ ಹೋಗಿ, ಯಾವ್ಯಾವ ರೂಮು ಯಾರಿಗೆ, ಎಲ್ಲೆಲ್ಲಿ ಆಲ್ಟ್ರೇಷನ್ ಅವಶ್ಯಕತೆಯಿದೆ ಎಂದು ಹಾಗೆ ಮನಸ್ಸಲ್ಲೇ ಅಂದಾಜು ಹಾಕಿ ಇಟ್ಟುಕೊಂಡಿದ್ದ.

ಕಿಟ್ಟಿಯ ತಂದೆಗೆ ಕೊನೆಗೆ ಮೈಸೂರಲ್ಲೇ ಇದ್ದ ತಮ್ಮ ಸೈಟಲ್ಲೇ ಮನೆ ಕಟ್ಟೋಣೂಂತ ನಿರ್ಧರಿಸಿ, ಅದರ ಉಸ್ತುವಾರಿ ಕಿಟ್ಟಿಗೆ ನೀಡಿದ್ದರಿಂದ, ತನ್ನ ಅಂದಾಜಿನಂತೆಯೇ ಕಿಟ್ಟಿ ಪ್ಲಾನ್ ಹಾಕಿ ಮೈಸೂರಲ್ಲೇ ಒಂದು ಮನೆಯಾಯಿತು. ಮದುವೆಯಾಗೊಂದು ಮಗು, ಮನೆ, ಈಗೊಂದು ಪರ್ಮನೆಂಟ್ ಕೆಲಸ. ಎಲ್ಲವೂ ಅದೂ ಮೈಸೂರಲ್ಲೇ! ಕಿಟ್ಟಿಯ ಮನಸ್ಸು ಜೀವನದ ಇನ್ನೆಲ್ಲಾ ಧ್ಯೇಯ ಗುರಿಗಳನ್ನ ಮರೆತು - 'ಸಾಕು' ಎಂದು ಸೋಂಬೇರಿಯಾಯಿತು‌. ಕಿಟ್ಟಿಗೇನೂ ಅಂತಾ ಮಹಾ ಧ್ಯೇಯ ಇತ್ತೆಂದಲ್ಲ. ಆದರೂ, ಒಮ್ಮೊಮ್ಮೆ ಅನಿಸುತ್ತದೆ - ತಾನೂ ಹೊರಗೆಲ್ಲಾದರೂ ಹೋಗಿ ಪಿ.ಎಚ್ಡಿಯನ್ನ ಮಾಡಬೋದಿತ್ತೆಂದು. ಜೀವನದ ಪಥವನ್ನೇ ಬೇರೆ ಮಾಡಿಕೊಳ್ಳಬೋದಿತ್ತೆಂದು.

 

ಕಿಟ್ಟಿಗೆ ಈ ಕೆಲಸದ ಆರ್ಡರ್ ಕಾಪಿ ಬರುವ ವೇಳೆಗೆ ರಮೆಯ ಊರಲ್ಲೇ ಇದ್ದ. ಗುಡ್ಡದ ಮೇಲಿದ್ದ ಒಂದು ವಾಟರ್ ಟ್ಯಾಂಕಿನ‌ಮೇಲೆ ಕುಳಿತಿದ್ದ - ಆದರೆ ಈಗ ಆ ಜೋಂಪು ಆವರಿಸಿರಲಿಲ್ಲ. ಅದಾಗಲೇ ಅವನ ಮನಸ್ಸು ಈ ಕೆಲಸ ಪಡೆಯುವ ಪ್ರಕ್ರಿಯೆಯಿಂದ ಭಾರವಾಗಿತ್ತು. ಆದರೂ ಅದರಿಂದ ಹೊರಬರಲು ಸಾಧ್ಯವಾಗದ ರೀತಿ ಅದರ ತೆಕ್ಕೆಗೆ ಸಿಕ್ಕಿ ಹೋಗಿದ್ದ. ಆತನಿಗೆ ಸಾಕಷ್ಟು ಗುಮಾನಿಯೂ ಇತ್ತು. ಇಂಟರ್ವ್ಯೂ ದಿವಸ ಇಂಟರ್ವ್ಯೂ ಮುಗಿಸಿ, ಹೊರಗೆ ಬಂದು ಆಟೋದಲ್ಲಿ ಕುಳಿತು, ಈ ಮೇಲ್ ಬರೆಯಲಾರಂಭಿಸಿದ್ದ - ಕಾಲೇಜಿನ ಪ್ರೆಸಿಡೆಂಟರಿಗೆ - ಇಂಟರ್ವ್ಯೂ ನಡೆಸೋದು ಹೇಗೆ ಅನ್ನೋದನ್ನ ಮೊದಲು ಈ ವ್ಯವಸ್ಥೆ ಕಲೀಬೇಕಿದೆಯೆಂದು. ಇದ್ದ ಜನರಲ್ಲಿ ಕಿಟ್ಟಿ ಯೋಗ್ಯನೇ ಆದರೂ, ಆ ಕೆಲಸಕ್ಕಾಗಿ ಸಂಸ್ಥೆಯ ಮೇಲೆ ಸಾಕಷ್ಟು ಒತ್ತಡವಿತ್ತು ಅನ್ನೋದು ಕಿಟ್ಟಿಗೆ ಬರುಬರುತ್ತಾ ನಿಧಾನವಾಗಿ ಅರಿವಾಯಿತು. ತನ್ನ ಯೋಗ್ಯತೆಯ ಆಧಾರದಲ್ಲೇ ಕೆಲಸ ಗಿಟ್ಟಿಸಿಕೊಂಡೆನೆಂದು  ಬೀಗಿದ್ದ ಕಿಟ್ಟಿಗೆ ಆತನ ಗುರುಗಳೇ ಒಮ್ಮೆ ಕೇಳಿದ್ದರು - 'ಎಷ್ಟಾಯ್ತು?' ಎಂದು. ಅಲ್ಲಿಂದ ಈ ಪ್ರಶ್ನೆ ಮಾಮೂಲಾಗಿ, ಕಳ್ಳ ಎಂದಾದರೂ ಸತ್ಯ ಹೇಳ್ತಾನೆಯೇ ಎನ್ನುವ ಮಾತುಗಳಿಗೂ ಆತ ಪ್ರತಿಕ್ರಿಯೆ ನೀಡಲಾಗದೇ ಸುಮ್ಮನಾಗುತ್ತಿದ್ದ.

 

ಇದೊಂದು ವಿಷವರ್ತುಲ. ಆದರೂ, ಅದನ್ನ ಬಿಟ್ಟು ಹೊರಬರಲು ಏಕೋ ಸಾಧ್ಯವಾಗದ ಸ್ಥಿತಿ. ಕಿಟ್ಟಿಗೆ ತನ್ನ ಮೂಲಭೂತ ಸ್ವಭಾವದ ಬಗ್ಗೆ ಹೇಸಿಗೆಯೆನಿಸತೊಡಗಿತ್ತು. ಎಂದಿಗೂ ಆತನಿಗೆ ತನ್ನ ಮೇಲೆ ಆತ್ಮವಿಶ್ವಾಸವಿದ್ದದ್ದೇ ಇಲ್ಲ. ಭವಿಷ್ಯದ ಭಯದಲ್ಲೋ, ತನಗೆ ಇನ್ನೆಲ್ಲಾದರೂ ಈ ರೀತಿಯ ಕೆಲಸ ಸಿಗ್ತದೆಯೇ ಎನ್ನುವ ಪ್ರಶ್ನೆಯಲ್ಲೋ ಆತ ಅಲ್ಲೇ ಇದ್ದ. ತನ್ನ ಜೀವನಕ್ಕೆ ಸೌಂದರ್ಯ ತುಂಬಿದ್ದ ರಸೆಲ್, ಪ್ಲೇಟೋ, ರೀಮಾನ್, ಸ್ಪಿನೋಜ಼ಾ, ತೇಜಸ್ವಿ, ನಾರಾಯಣ್ ಯಾರೊಬ್ಬರೂ ಕಿಟ್ಟಿಯ ನೆನಪಲ್ಲಿ ಉಳಿದೇ ಇಲ್ಲವೆನ್ನುವಂತೆ ಮರೆಯಾಗತೊಡಗಿದರು.

 

ಈಗೊಂದೆರೆಡು ದಿನಗಳಿಂದ ಕಿಟ್ಟಿಯ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿರಲಿಲ್ಲ. 'ಆತನ ಆಫೀಸೆದುರಿಗೆಯೇ ಆತ್ಮಹತ್ಯೆ ಮಾಡಿಕೊಂಡು ಆತನ ಹೆಸರನ್ನೇ ಬರೆದಿಟ್ಟು ಸಾಯ್ತೇನೆ' ಎಂದೆಲ್ಲಾ ಮಾತಾಡ್ತಿದ್ದ. ಕಿಟ್ಟಿಯ ಅಸಹಾಯಕತೆಯ ಮಟ್ಟವನ್ನ ಈ ಮಾತುಗಳಿಂದಲೇ ಅರಿಯಬೋದಿತ್ತು. ಸರ್ಕಾರಿ ವ್ಯವಸ್ಥೆಯಲ್ಲಿಯೊಳಗೆ ವ್ಯಕ್ತಿಯೊಬ್ಬ ಸ್ವಾಭಿಮಾನದ, ನೈತಿಕತೆಯ, ನಿಯತ್ತಿನ ವರ್ತನೆ ತೋರೋದೇ ಅಸಹಜ ವರ್ತನೆಯೆನ್ನೋದು ಸ್ವಯಂ ಅನುಭವಕ್ಕೆ ಬರುತ್ತಾ ಹೋಯಿತು. ಅಲ್ಲೀವರೆಗೆ ಅವೆಲ್ಲಾ ಕೇಳಿದ್ದಷ್ಟೆ ಅಥವಾ ಬೇರೆಯವರು ಹೇಳಿದ್ದನ್ನ ಕೇಳಿ ಗಿಣಿಯಂತೆ ಇನ್ನೊಬ್ಬರಿಗೆ ಹೇಳ್ತಿದ್ದಿದ್ದಷ್ಟೇ. 'ರಮಾ ನನಗೆ ನಾಲ್ಕೈದು ತಿಂಗಳು ಸಂಬಳ ಬರದೇ ಹೋದರೆ ಮ್ಯಾನೇಜ್ ಮಾಡಲಿಕ್ಕೆ ಆಗ್ತದ?' ಕೇಳಿದ್ದ. ಇದಕ್ಕುತ್ತರ ಅವನಿಗೇ ಗೊತ್ತು - ಆಗ್ತದೆ. ಕಿಟ್ಟಿಯ ತಂದೆಗೆ ಪೆನ್ಷನ್ ಇದ್ದೇ ಇದೆ. ಕೇಳಿದರೆ ಇಲ್ಲ ಅಂತ ಎಂದೂ ಅವರ ಬಾಯಿಂದ ಬಂದಿಲ್ಲ. ಆದರೂ ಕಿಟ್ಟಿಗೆ ಕೇಳಲಿಕ್ಕೇನೋ ಅಡ್ಡಿ - ತೀರಾ ಅನಿವಾರ್ಯದ ಸ್ಥಿತೀಲಿ ಕೇಳೂಣವೆಂದು. ಇದಕ್ಕಿನ್ನೊಂದು ಕಾರಣವೂ ಇತ್ತ - ಕಿಟ್ಟಿಗೂ ಅವನ ತಾಯಿಗೂ ಆಗಿಂದ್ದಾಗ್ಗೆ ಜಗಳ. ಜಗಳದ ನಡುವೆ ತಾಯಿ ಹಣದ ವಿಚಾರವನ್ನ ತರ್ತಾ ಇದ್ದದ್ದು ಇನ್ನೆಂದೂ ಇವರ ಬಳಿ ಕೈ ಚಾಚಬಾರದೂಂತ ಕಿಟ್ಟಿಗೆ ಅನಿಸಿಯೇ ಇತ್ತು. ಆದರೆ ಅದೇನು ಭೀಷಣ ಪ್ರತಿಜ್ಞೆ ಆಗಿರಲಿಲ್ಲ. ಅನಿವಾರ್ಯವೆನ್ನೋವಾಗ ಕೇಳಿದರಾಯ್ತು ಎಂದು ಸುಮ್ಮನಾಗಿದ್ದ. 'ಇಷ್ಟೆಲ್ಲಾ ಇನ್ಷ್ಯೂರೆನ್ಸ್, ಇ. ಎಮ್. ಐ ಕಟ್ಟಬೇಕಲ್ಲ. ಹೇಗೆ ಮ್ಯಾನೇಜ್ ಮಾಡೋದು?' ಎಂದು ರಮೆ ಹೇಳಿ 'ನಿನ್ನಿಷ್ಟ. ನಿನಗೆ ಮ್ಯಾನೇಜ್ ಮಾಡಬೋದನ್ನಿಸಿಸರೆ ಓಕೆ. ಆದರೆ ಒಮ್ಮೆ ಯೋಚಿಸು' ಎಂದು ಸೇರಿಸಿದ್ದರೂ, ಕಿಟ್ಟಿಗೆ ಅಧೈರ್ಯ ಕಾಡಿತು.

 

ಈ ತಿಂಗಳ ಸಂಬಳ ತಡೆ ಹಿಡೀತಾರೆ ಅಂತ ಕಿಟ್ಟಿಗೆ ತಿಳಿದಾಗ ಭಯಕ್ಕಿಂತ ಹೆಚ್ಚಾಗಿ ಕೋಪ ಬಂದದ್ದು ನಿಜ. ತಡೆ ಹಿಡಿಯೋದು ಅನ್ನೋದು ತನಗೆ ತೋರಿಸಿದ ಅಗೌರವವಲ್ಲವೇ? ಸಂಬಳಕ್ಕಾಗಿ ಈಗ ಅವರ ಮುಂದೆ ಕೈಚಾಚಿ ಬೇಡೂ ಹಾಗೆ ಅವರು ಮಾಡ್ತಿಲ್ಲವೇ? ಮಾಡಿರೋ ಕೆಲಸಕ್ಕಾದರೂ ಗೌರವವಿಲ್ಲವೇ ಎಂದು ತನ್ನಲ್ಲೇ ಊಹಿಸಿಕೊಳ್ಳುತ್ತಾ ಜೆ.ಡಿ. ಆಫಿಸಿಗೆ ಹೊರಟ. ಏನೆಲ್ಲಾ ಮಾತನಾಡಬೇಕೆಂದುಕೊಂಡರೂ, ಏನೆಲ್ಲಾ ಮಾತಾಡಿಬಿಟ್ಟರೆ ಮತ್ತಷ್ಟು ತೊಂದರೆಯಾಗಬೋದೂಂತ ಹೆದರಿಸಿದ್ದರಿಂದ, ಸಂಬಳ ಎಂದಾಗಬೋದು ಅಂತಷ್ಟೇ ಪ್ರಶ್ನೆ ಕೇಳಿ ಸುಮ್ಮನಾದ. ಜೆ.ಡಿಗೂ ಸಹ ಇದರ ಸ್ಪಷ್ಟ ನಿರ್ದೇಶನವಿಲ್ಲ. ವರ್ಕ್ ಲೋಡಿನ ಸಮಸ್ಯೆಯಿಂದಾಗಿ, ಕಿಟ್ಟಿಗೆ ಬೇರೆ ಕಾಲೇಜಿಗೆ ನಿಯೋಜನೆಯಾಗಬೇಕಿತ್ತು. ಮೈಸೂರು ಜೆ.ಡಿ.ಯಿಂದ ಬೆಂಗಳೂರಿನ ಕಮೀಷನರ್ ಆಪೀಸಿಗೆ ಇದರ ಮಾಹಿತಿ ತಲುಪಿ ಅಲ್ಲಿಂದ ಡೆಪ್ಯೂಟೇಷನ್ ಆದೇಶ ಬರವುದು ನಿಯಮ. ಎರಡು ತಿಂಗಳಾದರೂ ಕಮೀಷನರ್ ಆಪೀಸಿನಿಂದ ಉತ್ತರ ಬರದ ಕಾರಣ, ವರ್ಕ್ ಲೋಡಿನ ಕೊರತೆಯ ದೃಷ್ಟಿಯಿಂದ ಸಂಬಳ ತಾತ್ಕಾಲಿಕವಾಗಿ ತಡೆ ಹಿಡಿಯೋದು ಅಂತಾಯಿತು. ತನ್ನಲ್ಲದ ತಪ್ಪಿಗೆ ತನಗೆ ತೊಂದರೆಯೇಕೆ? ಆದರೆ ಇದು ಅವನ ಮನಸ್ಸನ್ನ ವಿಚಲಿತಗೊಳಿಸಿದ್ದಕ್ಕಿಂತ ಹೆಚ್ಚು ವಿಚಲಿತಗೊಳಿಸಿದ್ದೇ ಬೇರೆ. ಆದೇಶ ಬಂದಮೇಲೆ ಮರು ನಿಯೋಜನೆ ಮಾಡೋ ಸಂದರ್ಭ ವ್ಯಕ್ತಿಯ ನೈತಿಕತೆ, ನಿಯತ್ತಿನ ತಾತ್ವಿಕ ಅಧಃಪತನ ಉಂಟಾಗ್ತದೆ. 'ನೀವು ಹೋಗಿ ತಿಮ್ಮಯ್ಯನ್ನ ಭೆಟಿಯಾಗಿ. ಇಲ್ಲ ನಿಮ್ಮನ್ನ ಎಲ್ಲಿಗೆ ಬೇಕಾದ್ರೂ ಹಾಕಬೋದು. ಪಿರಿಯಾಪಟ್ನಕ್ಕೆ ಹಾಕಿದ್ರೆ ಏನು ಮಾಡ್ತೀರಿ?' ಕಲೀಗ್ ಒಬ್ಬರು ಎಚ್ಚರಿಸಿದರು. 

ಕಿಟ್ಟಿ 'ಹೋಗ್ತೀನಿ' ಅಂತ ಹೇಳಿದ್ರೂ ನಿಮಗೇನು ಹುಚ್ಚೇ? ಎನ್ಮುವ ಸುತ್ತಲಿರುವವರ, ತನಗೆ ಬೇಕಾದವರ ಮಾತು, ನಿಜವಾಗಿಯೂ ಆ ರೀತಿಯ ನೈತಿಕ ವರ್ತನೆ ಅಸಹಜವನ್ನಾಗಿಸಿಬಿಟ್ಟವು. ಆದರೂ ಕಿಟ್ಟಿ ಹೋಗ್ತೇನೆ ಅಂತ ಬಲವಾಗಿ ನಿಂತ. 'ಈಗ ನಿಲ್ತೀರಿ. ಆದರೆ ಮುಂದೆ ಮತ್ತೆ ಇದೇ ಥರ ವರ್ಕ್ ಲೋಡಿನ ಸಮಸ್ಯೆ ಬರ್ತದೆ. ಆಗ ನೀವು ಬಿಚ್ಚೋಲ್ಲ ಅಂತ ತಿಳಿದಿರ್ತದೆ. ನಿಮ್ಮ ಫೈಲು ಮುಂದೆ ಹೋಗಬೇಕಲ್ಲ ಸ್ವಾಮಿ. ಆಗ ಹೋಗಿ ಅವನ ಮುಂದೆ ಕೈ ಚಾಚಿ ನಿಲ್ತೀರೇನು?'

 

'ಯಾಕೆ? ಕಂಪ್ಲೇಂಟ್ ಮಾಡಿದರೆ ಆಗೂಲ್ವೆ? ಸರ್ಕಾರದ ನಿಯಮದ ಅನ್ವಯವೇ ಮಾಡಲಿ'

 

'ಮಾಡ್ತಾರೆ ಮಾಡ್ತಾರೆ. ಸಾಕಷ್ಟು ನಿಯಮಗಳು ಇವೆ ಸರ್ಕಾರಕ್ಕೆ. ನಿಮ್ಮ‌ಕೆಲಸ ನಿಧಾನ ಮಾಡಲಿಕ್ಕೆ ಸಾಕಷ್ಟು ಸಬೂಬುಗಳಿವೆ. ನಿಮಗೆ ಗೊತ್ತಿಲ್ಲ. ಇದೆಲ್ಲಾ ನಾನು‌ ಪ್ರಯತ್ನ ಮಾಡಿ, ಸೋತು, ಸರ್ಕಾರದ ನಿಯಮದ ತಕ್ಕಂತೆಯೇ ಮಾಡ್ತೇವೆ ಅಂತ ನನಗೆ ಹೇಳಿ ನಾಲ್ಕು‌ ತಿಂಗಳ ಸಂಬಳ ಇಲ್ಲದಾಯಿತು. ಕಂಪ್ಲೇಂಟ್ ಕೊಡ್ತೀರೇನು? ಏನಂತ ಕೊಡ್ತೀರಿ? ಲಂಚ ಕೇಳ್ತಾನಂತಲೇ? ಅವನೆಂದೂ ಬಾಯಿಬಿಟ್ಟು ಕೇಳೂಲ್ಲ ತನಗೆ ಬೇಕೂಂತ. ಅದು ಅಲಿಖಿತ ಒಪ್ಪಂದ. ರೂಢಿಯಲ್ಲಿ ಹಾಸುಹೊಕ್ಕಾಗಿ ಹೋಗಿರೋದು. ಅದಕ್ಕೊಂದು ರೇಟು ಅಂತ ಪಿಕ್ಸಾಗಿರ್ತದೆ. ಅದನ್ನ ತಿಳಕೊಂಡು, ಕಾಣಿಕೆಯೊಪ್ಪಿಸಿ ಹೋಗ್ತಾ ಇರಬೇಕು. ಇಷ್ಟು ಚಿಕ್ಕ ವಿಷಯಕ್ಕೆ ಯಾಕೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ತೀರಿ ಸಾರ್? ನೀವೇನು ಸಮಾಜ ಬದಲಿಸಿಬಿಡ್ತೀರೇನು? ಬುದ್ಧಿವಂತರಾಗಿ. ಇದೆಲ್ಲಾ ತಲೆಕೆಡಿಸಿಕೊಳ್ಳೂದು ಬಿಟ್ಟು, ಅದು ನಿಮ್ಮ ಹಣವಲ್ಲ ಅಂತ ತೆಗೆದಿಟ್ಟು, ತಿಮ್ಮಪ್ಪನ ಹುಂಡೀಗೆ ಹಾಕ್ತಿದ್ದೀನಂತ ಭಾವಿಸಿ, ನಿಮಗೆ ಇಷ್ಟವಾದ ಕೆಲಸವನ್ನ ನೆಮ್ಮದಿಯಿಂದ ಮಾಡಿ'

 

ಈ ಸಲಹೆ ಒಪ್ಪಬೋದಾಗಿದ್ದರೂ, ಕಿಟ್ಟಿಯ ಮನಸ್ಸು ಕಷ್ಟದಲ್ಲಿತ್ತು. ಹಿಂದೆ ಎಂದೂ ಹೀಗೆ ಎಲ್ಲೂ ಕೊಟ್ಟಿಲ್ಲವೆಂದಲ್ಲ. ಆದರೆ ಈಗ ಮನಸ್ಸು ಬಹಳ ಗಟ್ಟಿಯಾಗ್ತಾ ಇತ್ತು. ಸಹಜವಾಗಿ‌‌ ವ್ಯವಸ್ಥೆಗೆ ಹೊಂದುಕೊಂಡು ಹೋಗಿಬಿಡೋದು ರೂಢಿ. ಆದರೆ ಕಿಟ್ಟಿಯ ವಿಚಾರದಲ್ಲಿ ಹೊಂದಾಣಿಕೆಗೆ ಇನ್ನು ಸಮಯ ಬೇಕಿತ್ತೇನೋ! ಕಿಟ್ಟಿಗೆ ತಿಮ್ಮಯ್ಯನ ನೆನೆದು ರಕ್ತ ಕುದಿಯಲಾರಂಭಿಸಿತ್ತು - 'ನಾನೊಬ್ಬ ಬ್ರಾಹ್ಮಣ ಅಂತ ಎಲ್ಲೂ ಹೇಳಬಾರ್ದೂಂತ ನಿರ್ಧರಿಸಿದ್ದೆ‌. ಆದರೆ ಆ ತಿಮ್ಮಯನ ಮುಂದೆ ನನ್ನ ಜನಿವಾರ ಎಳೆದು, ಈ ಬ್ರಾಹ್ಮಣನ ಶಾಪ ನಿನಗೆ ತಟ್ಟೂಲ್ಲ ಅಂತ ಭಾವಿಸಬೇಡ. ನೀನು ತಿಂದದ್ದೆಲ್ಲಾ ಕಕ್ಕಿ ಸಾಯ್ತೀಯ' ಅಂತ ಹೇಳಬೇಕೂಂದೆಲ್ಲಾ ಎನಿಸಿದ್ದು ಕಿಟ್ಟಿಯ ಮಾನಸಿಕ ಕ್ಷೋಭೆಯನ್ನ ತೋರುವಂತಿದ್ದವು. ರಸೆಲ್ ನ ಆರಾಧಕನಾಗಿದ್ದ ಕಿಟ್ಟಿ ಇಷ್ಟು ಅಧೈರ್ಯ, ಅತಾರ್ಕಿಕತೆ ತೋರಲು‌ ಕಾರಣವಾದರೂ ಏನು ಎನ್ನೋದು ಅವನಿಗೇ ತಿಳಿಯದೇ ಅದಕ್ಕೂ ಮನಸ್ಸು ಚಿಟ್ ಎನ್ನುತ್ತದೆ.

 

ಊರಿಗೆ ಹೊಗೋ ಮುನ್ನ ಎಲ್ಲವನ್ನೂ ಸರಿ ಮಾಡಿಕೊಂಡು ಹೊರಡಿ ಎಂದು ಕಲೀಗ್ ಸಲಹೆ ನೀಡಿದ್ದರು. ಊರಿಗೆ ಹೊರಡುವ ಹಿಂದಿನ ದಿನ ಕಾಲೇಜಿನಲ್ಲಿ ಹೀಗೆ ಮಾತಾಡುತ್ತಾ, ಮನಸ್ಸಲ್ಲಿ ಇದ್ದದ್ದನ್ನೆಲ್ಲಾ ಹೆಚ್ಚು ಪರಿಚಯವಿದ್ದೊಬ್ಬರ ಬಳಿ ಹೊರ ಹಾಕಿದ. ಅವರ ಮಾತುಗಳು ಕಿಟ್ಟಿಗೆ ದಿಗ್ಭ್ರಮೆ ಉಂಟು ಮಾಡಿದವು. 'ಸಂಬಳ ಹಿಡೊಯೋದು ತಪ್ಪೇ ಸರ್. ಪಾಪ ನೀವು, ಎಷ್ಟೆಲ್ಲಾ ಕಷ್ಟ ಪಟ್ಟು, ಎಷ್ಟೆಲ್ಲಾ ಖರ್ಚು ಮಾಡಿ ಇಲ್ಲಿಗೆ ಬಂದಿರ್ತೀರಿ. ಈಗ ಹೀಗೆ ಮಾಡಿದ್ರೆ ನಿಮಗೆ ಕಷ್ಟವೇ ಅಲ್ಲವೆ'. ಕಿಟ್ಟಿಯ ಮೌನ, ಅವರ ಮಾತಿಗೆ ಪ್ರತಿಯಾಗಿ ಇರದ ವಿರೋಧ ಎಂತವರಿಗೂ ಕಿಟ್ಟಿಯ ಬಗ್ಗೆ ಗುಮಾನಿ ಹುಟ್ಟು ಹಾಕುವಂತಹದ್ದೇ. ಮತ್ತೊಬ್ಬರು ಹೇಳಿದರೆಂದು ತಿಳಿದು ಬಂದಿತು - 'ಒಂದು ತಿಂಗಳ ಸಂಬಳ ಬರದಿದ್ದಕ್ಕಾಗಿ ಇಷ್ಟೆಲ್ಲಾ ಹಾರಾಡ್ತಾರಲ್ಲ. ಅಷ್ಟು ಕೊಟ್ಟು ಬಂದೋರಿಗೆ, ಎರಡು ಕಾಸು ಬಿಚ್ಚೋಕ್ಕೆ ಕಷ್ಟವೇ? ಬಿಚ್ಚಿ ಸರಿ ಮಾಡಿಕೊಳ್ಳೋಕ್ಕೆ ಇಷ್ಟೆಲ್ಲಾ ನಾಟಕಗಳು'. ಕಿಟ್ಟಿಗೆ ಇವೆಲ್ಲಕ್ಕಿಂತ ಹೆಚ್ಚಾಗಿ ಬೇರೇನೋ ಕಾಡುತ್ತಿತ್ತು. ಕಾರಿನ ತುಂಬಾ ಅದೇ ಯೋಚನೆ. ತನ್ನ ಉಳಿವಿಗಾಗಿ ಹೋರಾಟ ಮಾಡುವಂತ ಸನ್ನಿವೇಶ ಒದಗಿ ಬಂತಲ್ಲ. ಒದಗಿ ಬರಕೂಡದೇ? ಕಿಟ್ಟಿಗೆ ತನ್ನ ಮೇಲೆ ತನಗೇ ಇದ್ದ ಅಂಧ ಅಹಂಕಾರದ ಅರಿವಾಗ್ತಾ ಹೋಯಿತು. ತಾನೇನೋ ವಿಶೇಷವಾದವ, ಹೀಗೆ ಉಳಿವಿಗಾಗಿ ಸಾಧಾರಣರಂತೆ ಹೋರಾಡುವ ಸ್ಥಿತಿಗೆ ತಾನೆಂದೂ ಬರಲು ಸಾಧ್ಯವಿಲ್ಲ ಎನ್ನುವ ಅಹಂಕಾರಕ್ಕೆ ಈ ಕೆಲಸದಲ್ಲಿ ಪದೇ ಪದೇ ಕೊಡಲಿ ಪೆಟ್ಟು ಬೀಳುತ್ತಿತ್ತೆ? ತಾನೂ ಸಹ ಸಾಧಾರಣರಲ್ಲಿ ಸಾಧಾರಣ ಎನ್ನುವ ಸತ್ಯದ ಅರಿವನ್ನು ಅರಗಿಸಿಕೊಳ್ಳೋಕ್ಕೆ ಮನ ಹಿಂಜರೀತಿತ್ತೆ? ಇದೇ ಅಸಲಿ ಕಾರಣವೇ? ತನ್ನ ನೈತಿಕತೆ, ನ್ಯಾಯ ಎಲ್ಲವೂ ಸಬೂಬುಗಳೇ? ಕಿಟ್ಟಿಯ ಕಣ್ಣಂಚಿನಿಂದ ಎರಡ್ಹನಿ ಜಾರಿ ಬಿದ್ದವು. ಇಡೀ ಬ್ರಹ್ಮಾಂಡದಲ್ಲಿ ತಾನೊಬ್ಬನೇ ಸೂರ್ಯನ ಬೆಳಕಲ್ಲಿ ಒಬ್ಬಂಟಿಗನಾಗಿ ಮೀಯುತ್ತಾ ನಿಂತಂತೆ ಭಾಸವಾಯಿತು. ತಾನು ಒಬ್ಬಂಟಿಗನೇ! ಇಲ್ಲಿ ಎಲ್ಲರೂ ತಮ್ಮ ಉಳಿವಿಗಾಗಿಯೇ ಹೇಗೋ ಹಾಗೆ ಹೋರಾಟ ನಡೆಸುತ್ತಾ ಮುನ್ನಡೀತಿದಾರೆ! ನನ್ನದೂ ಅದೇ!  

ರಮಾ ಮಗನನ್ನ ಹೆಗಲಿಗೇರಿಸಿ ಮಲಗಿದ್ದಳು.

 

ಹಿಂದಿನ ದಿನ ಸಂಜೆ ತಿಮ್ಮಯ್ಯ ಆಪೀಸಿನ ಹೊರಗೆ ಬಂದು ಜೇಬೊಳಗೆ ಕೈಸನ್ನೆ ಮಾಡಿದ್ದ. ಒಳಗಿಳಿಸಿದ್ದನ್ನ ತೆಗೆದು ನೋಡದೆಯೇ, ಒಮ್ಮೆ ಸವರಿ, ನಂತರ ಜೇಬಿನ ಮೇಲೆ ತಟ್ಟಿ, ಇವೆಲ್ಲಾ ಒಂದು ರಾತ್ರಿಗೂ ಸಾಲೋಲ್ವಲ್ರಿ. ಇರಲಿ‌ ಬಿಡಿ. ಪ್ರೀತಿಯಿಂದ ನೀಡಿದ್ದೀರಿ. ನನಗೆ ನಿಮ್ಮಂತಹವರ ಬಗ್ಗೆಯೇ ಚಿಂತೆ. ನಿಮಗೆಲ್ಲಾ ಒಳ್ಳೇದಾಗಲೀ ಅನ್ನೋದೇ ನನ್ನ ಆಶಯ. ಅದೇ ಧ್ಯೇಯದಲ್ಲೇ ನಾನು ನಿಮ್ಮ ಬಗ್ಗೆ ಚಿಂತಿಸಿ,‌ ನಿಮಗೆ ಒಳಿತಾಗೋ ಹಾಗೇಯೇ ಯೋಚನೇ ಮಾಡ್ತೀನಿ ಎಂದು ಹಲ್ಕಿರಿದು ನಕ್ಕಿದ್ದ. ಕಿಟ್ಟಿ ಸುಮ್ಮನೆ ನಕ್ಕು ಬಂದಿದ್ದ.


No comments:

Post a Comment